ನಾನು ಸೇರಿದಂತೆ ವಿಪಕ್ಷಗಳ ನಾಯಕರಿಗೆ ಕೇಂದ್ರ ಸರಕಾರ ಸಿಬಿಐ, ಐಟಿ, ಈಡಿ ದಾಳಿ ಮೂಲಕ ಕಿರುಕುಳ ನೀಡುತ್ತಿದೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-03-30 15:20 GMT

ಬೆಂಗಳೂರು: ‘ಇತ್ಯರ್ಥವಾದ ವಿಷಯಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ (ಐಟಿ) ನಿನ್ನೆ ರಾತ್ರಿ ನನಗೆ ನೋಟಿಸ್ ನೀಡಿದ್ದು, ಚುನಾವಣೆಯಲ್ಲಿ ಸೋಲಿನ ಭೀತಿ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಪಕ್ಷಗಳ ಮುಖಂಡರಿಗೆ ಭಯ ಹುಟ್ಟಿಸಲು ಯತ್ನ ನಡೆಸಿದೆ’ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಈಗಾಗಲೇ ಇತ್ಯರ್ಥವಾದ ವಿಚಾರಕ್ಕೆ ನೋಟಿಸ್ ಬಂದಿದೆ. ಕೇಂದ್ರ ಸರಕಾರ ವಿಪಕ್ಷಗಳನ್ನು ಟಾರ್ಗೆಟ್ ಮಾಡಿದೆ. ನಾನು ಸೇರಿದಂತೆ ವಿಪಕ್ಷಗಳ ಅನೇಕ ನಾಯಕರಿಗೆ ಸಿಬಿಐ, ಐಟಿ, ಇಡಿ ದಾಳಿ ಮೂಲಕ ಕಿರುಕುಳ ನೀಡುತ್ತಿದೆ. ಆದರೆ, ದಾಳಿ ಸಂಬಂಧ ಇದುವರೆಗೂ ಸೂಕ್ತ ದಾಖಲೆ ಸಲ್ಲಿಸಿಲ್ಲ. ಕೇಂದ್ರದ ತನಿಖಾ ಸಂಸ್ಥೆಗಳ ದಾಳಿಯನ್ನು ನಾವು ಎದುರಿಸುತ್ತೇವೆ ಎಂದು ಹೇಳಿದರು.

ಬಿಜೆಪಿಯವರು ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲ. ಅಧಿಕಾರ ಬರುತ್ತದೆ, ಹೋಗುತ್ತದೆ. ಯಾವುದು ಶಾಶ್ವಾತವಲ್ಲ. ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷಗಳನ್ನು ಟಾರ್ಗೆಟ್ ಮಾಡಲಾಗಿದೆ. ಸೋಲಿನ ಭಯದಿಂದ ಎನ್‍ಡಿಎ ಮೈತ್ರಿಕೂಟ ಹತಾಶೆಗೆ ಒಳಗಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಮೋರ್ ಸ್ಟ್ರಾಂಗ್ ಮೋರ್ ಎನಿಮಿಸ್, ಮೋರ್ ಸ್ಟ್ರಾಂಗ್ ಮೋರ್ ಪವರ್. ಅಮಿತ್ ಶಾ ಆದರೂ ಬರಲಿ, ಪ್ರಧಾನಿ ಮೋದಿ ಆದರೂ ಬರಲಿ, ನಮಗೆ ಇದೆಲ್ಲಾ ಹೊಸದು ಅಲ್ಲ. ಗೌಡರನ್ನು ಎದುರಿಸಿದ್ದೇವೆ, ಗೌಡರ ಮಗ ಕುಮಾರಸ್ವಾಮಿಯವರನ್ನು ಎದರಿಸಿದ್ದೇವೆ. ಗೌಡರ ಮೊಮ್ಮಗನನ್ನು ಎದುರಿಸಿದ್ದೇವೆ, ಸೊಸೆಯನ್ನು ಎದುರಿಸಿದ್ದೇವೆ. ಈಗ ಗೌಡರ ಅಳಿಯನನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News