ಕೇಂದ್ರ ಸರಕಾರ ರಾಜಕೀಯ ಉದ್ದೇಶದಿಂದ ಸಿಎಎ ಅಧಿಸೂಚನೆ ಹೊರಡಿಸಿದೆ : ಗೃಹ ಸಚಿವ ಜಿ.ಪರಮೇಶ್ವರ

Update: 2024-03-11 14:34 GMT

ಬೆಂಗಳೂರು: ಲೋಕಸಭಾ ಚುನಾವಣಾ ದೃಷ್ಟಿಯಿಂದ ಕೇಂದ್ರ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಹೊರಡಿಸಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಪೌರತ್ವ ತಿದ್ದುಪಡಿ ಕಾಯ್ದೆಗೆ ಬಹಳಷ್ಟು ಜನರು ವಿರೋಧ ವ್ಯಕ್ತಪಡಿಸಿರುವುದನ್ನು ನಾವೆಲ್ಲ ನೋಡಿದ್ದೇವೆ. ಇದರ ನಡುವೆಯೂ ಕೇಂದ್ರ ಸರಕಾರ ಇಂತಹ ನಿರ್ಧಾರಕ್ಕೆ ಬಂದಿದೆ. ಚುನಾವಣೆ ದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಲ್ಲಿ ರಾಜಕೀಯ ಉದ್ದೇಶವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.

ಬಿಜೆಪಿಯವರಿಗೆ ಎಲ್ಲೋ ಒಂದು ಕಡೆ ಸೋಲಿನ ಆತಂಕ ಕಾಡುತ್ತಿದೆ. ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತರಾದರೂ ಸೋಲಿನ ಭಯವಿದೆ. ಬಿಜೆಪಿಯವರಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ಕಡಿಮೆಯಾದಂತಿದೆ. ಅದಕ್ಕಾಗಿ ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಸೈಬರ್ ಕ್ರೈಂ ವಿಷಯಗಳ ಕುರಿತು ಸಭೆ

ಸುಳ್ಳು ಸುದ್ದಿ ಹರಡುವುದು, ಫೋಟೋ ಮತ್ತು ವಿಡಿಯೋಗಳನ್ನು ತಿರುಚಿ ಬಿತ್ತರಿಸುವುದು ಸೇರಿದಂತೆ ವಿವಿಧ ರೀತಿಯ ಸೈಬರ್ ಕ್ರೈಂ ನಡೆಯುತ್ತಿವೆ. ಇಂತಹ ಪ್ರಕರಣಗಳಿಗೆ ಯಾವ ರೀತಿ ಕ್ರಮ ತೆಗದುಕೊಳ್ಳಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಂಮತ್ರಿ‌ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸೈಬರ್ ಕ್ರೈಂ ವಿಷಯಗಳ ಕುರಿತ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನೆರಡು ದಿನಗಳಲ್ಲಿ ಸರಕಾರ ಆದೇಶ‌ ಹೊರಡಿಸುತ್ತದೆ ಎಂದು ತಿಳಿಸಿದರು.

ಮಲ್ಟಿ ಡಿಪಾರ್ಟ್‌ಮೆಂಟ್ ಕೋರ್ಡಿನೇಷನ್ ಕಮಿಟಿಯನ್ನು ರಚಿಸಲಾಗಿದೆ. ಇದಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ. ನೋಡಲ್ ಅಧಿಕಾರಿಗೆ ಹೆಚ್ಚಿನ ಜವಾಬ್ಧಾರಿಯನ್ನು ವಹಿಸಲಾಗುತ್ತಿದೆ. ಡಿಜಿ ಮತ್ತು ಐಜಿಪಿ ಮೂಲಕ ಸರಕಾರಕ್ಕೆ ಮಾಹಿತಿ ಕೊಡುತ್ತಾರೆ ಎಂದು ವಿವರಿಸಿದರು‌.

ವರದಿ ಆಧರಿಸಿ ಕ್ರಮ

ಮೆಣಸಿನಕಾಯಿ ದರ ರೂ. 20 ಸಾವಿರದಿಂದ ರೂ. 8 ಸಾವಿರಕ್ಕೆ ಒಂದೇ ದಿನದಲ್ಲಿ ಕುಸಿತವಾಗಿದೆ. ಇದರಿಂದ ಹಾವೇರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಗಲಾಟೆಯಾಗಿದೆ ಎಂಬುದು ಗೊತ್ತಾಗಿದೆ.‌ ಈ ರೀತಿಯ ದರ ಕುಸಿತ ಎಲ್ಲ‌‌ ಎಪಿಎಂಸಿ ಮಾರುಕಟ್ಟೆಗಳಲ್ಲಿ ಆಗಿದಿಯಾ ಅಥವಾ ಹಾವೇರಿ ಮಾರುಕಟ್ಟೆಯಲ್ಲಿ ಮಾತ್ರ ಆಗಿದಿಯಾ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಎಪಿಎಂಸಿ ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಲಾಗಿದೆ. ಒಂದೇ ದಿನದಲ್ಲಿ 12 ಸಾವಿರ ರೂ. ದರ‌ ಕುಸಿಯಲು ಏನು ಕಾರಣವೇನು ಎಂಬುದನ್ನು ತಿಳಿಯಲು ವರದಿ ನೀಡುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು‌ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News