ಚನ್ನಪಟ್ಟಣದಲ್ಲಿ ಮುಸ್ಲಿಮರು ಮತ ನೀಡಿರದಿದ್ದರೆ ಕುಮಾರಸ್ವಾಮಿ ಗೆಲ್ತಿದ್ರಾ?: ಝಮೀರ್ ಅಹ್ಮದ್ ಖಾನ್

Update: 2023-09-24 13:01 GMT

ಬೆಂಗಳೂರು, ಸೆ.24: ಮುಸ್ಲಿಮ್ ಸಮುದಾಯದ ಜತೆ ನಾನು ನಿಂತಿದ್ದೆ. ಆದರೆ ಆ ಸಮುದಾಯ ಜೆಡಿಎಸ್ ಜತೆ ನಿಲ್ಲಲಿಲ್ಲ ಎಂದು ಹೇಳುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಯಾರ ಮತಗಳಿಂದ ಗೆದ್ದರು ಎಂಬುದನ್ನು ಹೇಳಲಿ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಆಗ್ರಹಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಮುಸ್ಲಿಮ್ ಸಮುದಾಯ ಮತ ನೀಡಿರದಿದ್ದರೆ ಇವರು ಗೆಲ್ಲುತ್ತಿದ್ದರೆ ಎಂಬುದನ್ನು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದರು.

ಹೊಳೆನರಸೀಪುರದಲ್ಲಿ ಎಚ್.ಡಿ.ರೇವಣ್ಣ, ತುರುವೇಕೆರೆಯಲ್ಲಿ ಎಂ.ಟಿ.ಕೃಷ್ಣಪ್ಪ, ಚಿಕ್ಕ ನಾಯಕನಹಳ್ಳಿಯಲ್ಲಿ ಸುರೇಶ್ ಬಾಬು, ಗುರುಮಿಠಕಲ್‍ನಲ್ಲಿ ನಾಗನಗೌಡ ಕಂದಕೂರು, ದೇವದುರ್ಗದಲ್ಲಿ ಕರೆಮ್ಮ, ಚನ್ನರಾಯಪಟ್ಟಣದಲ್ಲಿ ಬಾಲಕೃಷ್ಣ ಇವರೆಲ್ಲ ಮುಸ್ಲಿಮ್ ಸಮುದಾಯ ನಮಗೆ ಮತ ಹಾಕಿಲ್ಲ ಎಂದು ಹೇಳಲಿ ನೋಡೋಣ ಎಂದು ಝಮೀರ್ ಅಹ್ಮದ್ ಖಾನ್ ಸವಾಲು ಹಾಕಿದರು.

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ದೊಡ್ಡ ಅಂತರದಲ್ಲಿ ಗೆಲ್ಲಲಿಲ್ಲ. ಅಲ್ಲಿ ಮುಸ್ಲಿಮ್ ಸಮುದಾಯ ಒಟ್ಟಾಗಿ ಮತ ಕೊಟ್ಟಿದ್ದಕ್ಕೆ ಅವರು ಗೆದ್ದಿದ್ದು ಇಲ್ಲದಿದ್ದರೆ ಸೋಲುತ್ತಿದ್ದರು. ಮುಸ್ಲಿಮ್ ಸಮುದಾಯ ಜೆಡಿಎಸ್‍ಗೆ ಮತ ಕೊಟ್ಟಿದ್ದಕ್ಕೆ 19 ಸ್ಥಾನ ಬಂದಿದೆ. ಇಲ್ಲದಿದ್ದರೆ 5ರಿಂದ ಆರು ಸ್ಥಾನಕ್ಕೆ ಜೆಡಿಎಸ್ ಸೀಮಿತವಾಗಿರುತ್ತಿತ್ತು ಎಂದು ಅವರು ತಿರುಗೇಟು ನೀಡಿದರು.

ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಜತೆ ಹೋಗುವ ಸಲುವಾಗಿ ಮುಸ್ಲಿಮ್ ಸಮುದಾಯ ಮತ ಕೊಡಲಿಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಇದು ಮುಸ್ಲಿಮ್ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ ಝಮೀರ್ ಅಹ್ಮದ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೋಮುವಾದಿ ಬಿಜೆಪಿ ವಿರುದ್ಧ ಇದ್ದವರು. ಆದರೆ ಕುಮಾರಸ್ವಾಮಿ ತಮ್ಮ ರಾಜಕಾರಣಕ್ಕೆ ಗೌಡರ ತತ್ವ ಸಿದ್ದಾಂತ ಬಲಿ ಕೊಟ್ಟಿದ್ದಾರೆ ಎಂದು ದೂರಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News