ಚಿಕ್ಕಮಗಳೂರು | ಮಲೆನಾಡು ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕಲು ಆಗ್ರಹಿಸಿ ಧರಣಿ
ಚಿಕ್ಕಮಗಳೂರು, ಆ.19: ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಗ್ರಾಮೀಣ ಭಾಗಕ್ಕೆ ನಿವೇಶನ, ಮನೆ, ಹಕ್ಕುಪತ್ರ ಶಾಲೆ, ಅಂಗನವಾಡಿ, ಆಸ್ಪತ್ರೆ, ನೀರು, ರಸ್ತೆಯಂತಹ ಮೂಲಸೌಕರ್ಯ ನೀಡಬೇಕಿದ್ದ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಮದ್ಯ ಮಾರಾಟಗಾರರಿಗೆ ಸಹಕಾರ ನೀಡುತ್ತಿದ್ದಾರೆ. ಹಳ್ಳಿಹಳ್ಳಿಗಳಲ್ಲಿ ಮದ್ಯದಂಗಡಿಗಳಿಗೆ ಸರಕಾರ ಪರವಾನಿಗೆ ನೀಡತ್ತಿದ್ದರೇ, ಅಕ್ರಮ ಮದ್ಯ ಮಾರಾಟಗಾರರಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಸಾರಾಯಿ ವಿರೋಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷೆ ಸಂಚಾಲಕಿ ಹಾಗಲಗಂಚಿ ಆರೋಪಿಸಿದರು.
ಗುರುವಾರ ಜಿಲ್ಲೆಯ ಕೊಪ್ಪ, ಶೃಂಗೇರಿ ತಾಲೂಕಿನ ಗಡಿ ಭಾಗವಾಗಿರುವ ಗಡಿಕಲ್ಲು ಗ್ರಾಮದಲ್ಲಿ ಸಾರಾಯಿ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿದ್ದಾರೆ. ಸಮಿತಿ ವತಿಯಿಂದ ಈ ಸಂಬಂಧ ಅನೇಕ ಬಾರಿ ಹೋರಾಟ, ಮನವಿ ಮಾಡಿದ್ದರ ಫಲವಾಗಿ ಪೊಲೀಸರು ಒಂದಷ್ಟು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದ್ದರೂ ಅಕ್ರಮ ಮದ್ಯ ಮಾರಾಟ ಸಂಪೂರ್ಣವಾಗಿ ನಿಂತಿಲ್ಲ. ದಿನಸಿ ಅಂಗಡಿಗಳು, ಮನೆಗಳಲ್ಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಅಕ್ರಮ ಮದ್ಯ ಮಾರಾಟಗಾರರಿಂದ ಲಂಚ ಪಡೆದು ಮಲೆನಾಡಿನ ಪ್ರತೀ ಹಳ್ಳಿಗಳನ್ನು ಕಡುಕರ ಅಡ್ಡೆಯನ್ನಾಗಿ ಮಾಡುತ್ತಿದ್ದಾರೆ ಎಂಬ ಶಂಕೆ ಇದೆ. ಕೊಪ್ಪ, ಶೃಂಗೇರಿ, ಕಳಸದಂತಹ ತಾಲೂಕುಗಳ ವ್ಯಾಪ್ತಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಜನರು ಹೆಚ್ಚಾಗಿದ್ದು, ಬಹುತೇಕ ಜನರು ಕೂಲಿ ಕಾರ್ಮಿಕರು, ಬಡತನ ರೇಖೆಗಿಂತ ಕೆಳಸ್ಥರದಲ್ಲಿರುವ ಜನರಾಗಿದ್ದಾರೆ. ಕೂಲಿ ಮಾಡಿ ಬದುಕುವ ಜನರು ಬೆವರು ಸುರಿಸಿ ಗಳಿಸಿದ ಹಣವನ್ನು ಮದ್ಯದಂಗಡಿಗಳು ಅಕ್ರಮ ಮದ್ಯಮಾರಾಟಗಾರರು ಲೂಟಿ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ನಿವೇಶನ, ಮನೆ, ಹಕ್ಕುಪತ್ರ, ಶಾಲೆ, ನೀರು, ರಸ್ತೆ, ಆರೋಗ್ಯ ಸೇವೆಯಂತಹ ಮೂಲಸೌಕರ್ಯಗಳನ್ನು ಕೇಳುತ್ತಿದ್ದಾರೆ. ಆದರೆ ಸರಕಾರ ಹಳ್ಳಹಳ್ಳಿಗಳಲ್ಲಿ ಸಾರಾಯಿ ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತಿದೆ. ಅಕ್ರಮವಾಗಿ ಕಳಪೆ ಮದ್ಯ ಮಾರಾಟ ಮಾಡುತ್ತಿರುವ ದೂರುಗಳೂ ಕೇಳಿ ಬಂದಿದ್ದು, ಇಂತಹ ಮದ್ಯ ಸೇವಿಸಿ ಮೇಗೂರು ಗ್ರಾಮ ವ್ಯಾಪ್ತಿಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ದೂರಿದರು.
ಇತ್ತೀಚೆಗೆ ಅಗಳಗಂಡಿ ಸಮೀಪದ ಕಚಿಗೆ ಗ್ರಾಮದಲ್ಲಿ ಎಂಎಸ್‍ಐಎಲ್ ಮದ್ಯದಂಗಡಿ ತೆರೆಯಲು ಸಂಚು ಮಾಡಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸದ್ಯ ಮದ್ಯದಂಗಡಿ ಆರಂಭಿಸುವ ಸಂಚು ತಣ್ಣಗಾಗಿದೆ. ತೆರೆಮರೆಯಲ್ಲಿ ಮದ್ಯದಂಗಡಿ ಆರಂಭಿಸಲು ಹುನ್ನಾರ ಮಾಡುತ್ತಿರುವ ಸಂಗತಿ ತಿಳಿದು ಬಂದಿದೆ. ಯಾವುದೇ ಕಾರಣಕ್ಕೂ ಇಲ್ಲಿ ಮದ್ಯದಂಗಡಿ ತೆರೆಯಬಾರದು. ಎಚ್ಚರಿಕೆ ಮೀರಿ ಮದ್ಯದಂಗಡಿ ಆರಂಭಿಸಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಇದೇ ವೇಳೆ ಅವರು ಎಚ್ಚರಿಸಿದರು.
ಕರ್ನಾಟಕ ಜನಶಕ್ತಿ ವೇದಿಕೆ ಸಂಚಾಲಕ ಗೌಸ್‍ಮೊಹಿದ್ದೀನ್ ಮಾತನಾಡಿ, ಬದುಕಲು ಸೌಲಭ್ಯ ಕೊಡಿ ಎಂದರೆ ಸರಕಾರ ಸಾರಾಯಿ ಕುಡಿಯಿರಿ ಎಂದು ಗ್ರಾಮೀಣ ಭಾಗದಲ್ಲಿ ಮದ್ಯದಂಗಡಿಗಳನ್ನು ತೆರೆಯುತ್ತಿದೆ. ಪರಿಣಾಮ ಹಳ್ಳಿಗಾಡಿನ ಜನರು ದುಡಿದ ಹಣವನ್ನು ಮದ್ಯಕ್ಕೆ ಸುರಿಯುತ್ತಿದ್ದಾರೆ. ಬಡ ಕುಟುಂಬಗಳು ಇದರಿಂದಾಗಿ ಶಿಕ್ಷಣದಂತಹ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ ಎಂದ ಅವರು, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಮಲೆನಾಡು ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯಮಾರಾಟಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಗ್ರಾಮೀಣ ಭಾಗದಲ್ಲಿರುವ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಿಸಬೇಕು. ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡಬಾರದು. ಗ್ರಾಮೀಣ ಭಾಗದ ಜನರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರಕಾರ, ಜನಪ್ರತಿನಿಧಿಗಳು ಅಗತ್ಯ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಮತ್ತೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಭಾಗ್ಯಾ ಹಾಗಲಗಂಚಿ, ಕಡೂರು ಅಹ್ಮದ್, ನಝೀರ್ ಕಚಿಗೆ, ಕಾಂಗ್ರೆಸ್ ಮುಖಂಡ ಶಬರೀಶ್ ಮತ್ತಿತರರು ಮಾತನಾಡಿದರು. ಮುಖಂಡರಾದ ಆನಂದ್, ವೆಂಕಟೇಶ್, ರಾಮುಕೌಳಿ, ಪವಿತ್ರಾ, ಪ್ರಭಾ, ಸುರೇಶ್, ಸರೋಜ ಮತ್ತಿತರರು ಧರಣಿ ನೇತೃತ್ವವಹಿಸಿದ್ದರು. ಧರಣಿಗೂ ಮುನ್ನ ವಿವಿಧ ಗ್ರಾಮಗಳ ನೂರಾರು ಮಹಿಳೆಯರು ಅಗಳಗಂಡಿ ಗ್ರಾಮದಿಂದ ಗಡಿಕಲ್ಲು ಗ್ರಾಮದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಧರಣಿ ಬಳಿಕ ತಹಶೀಲ್ದಾರ್ ಹಾಗೂ ಅಬಕಾರಿ, ಪೊಲೀಸ್ ಅಧಿಕಾರಿಗಳ ಮೂಲಕ ಜಿಲ್ಲಾಡಳಿತ, ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.