ಅಕ್ರಮ ಭೂ ಮಂಜೂರಾತಿ :ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆಗೆ ಮುಂದಾದ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ

Update: 2023-11-18 15:42 GMT

ಚಿಕ್ಕಮಗಳೂರು, ನ.18: ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣಗಳ ವಿಚಾರಣೆ ನಡೆಸಲು ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಮುಂದಾಗಿದ್ದು, ಅಕ್ರಮವಾಗಿ ಸರಕಾರಿ ಜಾಗವನ್ನು ಮಂಜೂರು ಮಾಡಿಸಿಕೊಂಡುವರಲ್ಲಿ ನಡುಕ ಶುರುವಾಗಿದೆ .

ಜಿಲ್ಲೆಯ ಕಡೂರು, ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ನಡೆದಿರುವ ಸಾವಿರಾರು ಎಕರೆ ಸರಕಾರಿ ಭೂಮಿ ಅಕ್ರಮ ಮಂಜೂರಾತಿ ಪ್ರಕರಣಗಳ ಬಗ್ಗೆ ಇತ್ತೀಚೆಗೆ 13 ವಿಶೇಷ ತಹಶೀಲ್ದಾರ್ ತಂಡ ತನಿಖೆ ನಡೆಸಿದ್ದು, ತನಿಖಾ ವರದಿ ಸರಕಾರದ ಕೈ ಸೇರಿದೆ. ಈ ಪ್ರಕರಣಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕರಣವಾದ ವರದಿ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಲು ಮುಂದಾಗಿದ್ದು, ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಒದಗಿಸಬೇಕೆಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ ಎಂದು ಕಂದಾಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ಅಕ್ರಮ ಮಂಜೂರಾತಿ ಬಗ್ಗೆ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಕೂಡ 400ಕ್ಕೂ ಹೆಚ್ಚು ಪ್ರಕರಣಗಳನ್ನು ವಿಚಾರಣೆ ನಡೆಸಿದ್ದು, ವಿದೇಶಗಳಲ್ಲಿ ನೆಲೆಸಿರುವ ವ್ಯಕ್ತಿಗಳಿಗೂ ಸರಕಾರಿ ಜಾಗ ಮಂಜೂರು ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಈ ಎಲ್ಲಾ ಪ್ರಕರಣಗಳ ಮಾಹಿತಿಯನ್ನೂ ಭೂಕಬಳಿಕ ನಿಷೇಧ ನ್ಯಾಯಾಲಯ ಪಡೆದುಕೊಳ್ಳಲಿದ್ದು, ಅಕ್ರಮ ಭೂ ಮಂಜೂರಾತಿ ಪ್ರಕರಣದ ವಿಚಾರಣೆ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಭೂಗಳ್ಳರಲ್ಲಿ ನಡುಕ ಉಂಟಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News