ಚಿಕ್ಕಮಗಳೂರು | ವಿಶೇಷ ಚೇತನ ಬಾಲಕಿಯ ಅತ್ಯಾಚಾರ ಪ್ರಕರಣ: 4 ವರ್ಷಗಳ ಬಳಿಕ ಡಿಎನ್‍ಎ ಪರೀಕ್ಷೆ ಆಧರಿಸಿ ಆರೋಪಿ ಬಂಧನ

Update: 2023-08-22 17:03 GMT

ಚಿಕ್ಕಮಗಳೂರು, ಆ.22: ಕಳೆದ 4 ವರ್ಷಗಳ ಹಿಂದೆ ವಿಶೇಷ ಚೇತನ ಬಾಲಕಿಯ ಮೇಲೆ ಅತ್ಯಾಚಾರ ಕೃತ್ಯ ಎಸಗಿದ್ದ ಆರೋಪಿಯನ್ನು 4 ವರ್ಷಗಳ ಬಳಿಕ ಡಿಎನ್‍ಎ ಪರೀಕ್ಷೆ ಆಧಾರದ ಮೇಲೆ ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ವರದಿಯಾಗಿದೆ.

ಬಂಧನಕ್ಕೊಳಗಾದ ಆರೋಪಿಯನ್ನು ತರೀಕೆರೆ ತಾಲೂಕಿನ ಎಚ್.ರಂಗಾಪುರ ಗ್ರಾಮದ ನಿವಾಸಿ, ಕೂಲಿ ಕೆಲಸ ಮಾಡಿಕೊಂಡಿದ್ದ ಹರೀಶ್(19) ಎಂದು ಗುರುತಿಸಲಾಗಿದ್ದು, ಕಳೆದ 2019, ಫೆ.28ರಂದು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದ ಅಪ್ರಾಪ್ತ ವಯಸ್ಸಿನ ವಿಶೇಷ ಚೇತನ ಬಾಲಕಿಯ ಮೇಲೆ ಅತ್ಯಾಚಾರ ಕೃತ್ಯ ಎಸಗಿದ್ದ ಪ್ರಕರಣ ನಡೆದಿತ್ತು.

ಈ ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಂದು ಪ್ರಕರಣದ ಆರೋಪಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಕರಣ ತನಿಖೆಯಲ್ಲಿ ಮುಂದುವರಿದಿತ್ತು.

2020ರಲ್ಲಿ ಆಶಾ ಕಾರ್ಯಕರ್ತೆಯರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ವೇಳೆ ಪುನಃ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬಗ್ಗೆ ಸುಳಿವು ಸಿಗದ ಹಿನ್ನೆಲೆಯಲ್ಲಿ ಕಳೆದ 4 ವರ್ಷಗಳಿಂದ ಪ್ರಕರಣದ ತನಿಖೆ ನಡೆಯುತ್ತಲೇ ಇತ್ತು. ಆದರೆ ಆರೋಪಿ ಮಾತ್ರ ಪತ್ತೆಯಾಗಿರಲಿಲ್ಲ.

ಈ ಪ್ರಕರಣ ಬೇಧಿಸುವ ನಿಟ್ಟಿನಲ್ಲಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ತರೀಕೆರೆ ಉಪವಿಭಾಗದ ಡಿವೈಎಸ್ಪಿಗಳಾದ ನಾಗರಾಜ್ ಹಾಗೂ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ತನಿಖಾಧಿಕಾರಿಯಾಗಿದ್ದ ತರೀಕೆರೆ ಪೊಲೀಸ್ ಇನ್‍ಸ್ಪೆಕ್ಟರ್ ವೀರೇಂದ್ರ ಹಾಗೂ ಎಎಸ್ಸೈ ಸುಕುಮಾರ್ ಮತ್ತು ಸಿಬ್ಬಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಾಸ್ಪದ ವ್ಯಕ್ತಿಗಳನ್ನು ಕರೆತಂದು ಡಿಎನ್‍ಎ ಪರೀಕ್ಷೆಗೊಳಪಡಿಸಿದಾಗಿ ಅಪ್ರಾಪ್ತ ವಿಶೇಷ ಚೇತನ ಬಾಲಕಿಯ ಅತ್ಯಾಚಾರಗೈದ ಆರೋಪಿ ಪತ್ತೆಯಾಗಿದ್ದಾನೆ.

ಕಳೆದ ನಾಲ್ಕು ವರ್ಷಗಳಿಂದ ತನಿಖೆಯಲ್ಲಿದ್ದ ಪ್ರಕರಣ ಬೇಧಿಸಿ ಆರೋಪಿಯನ್ನು ಬಂಧಿಸಿರುವ ಪೊಲೀಸ್ ಅಧಿಕಾರಿಗಳ ತಂಡವನ್ನು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News