ಕುಮಾರಸ್ವಾಮಿ ಅರೆಸ್ಟ್‌ಗೆ ನೂರು ಸಿದ್ದರಾಮಯ್ಯ ಅಲ್ಲ, ಒಬ್ಬ ಕಾನ್ ಸ್ಟೇಬಲ್ ಸಾಕು : ಸಿಎಂ ಸಿದ್ದರಾಮಯ್ಯ
ವಿಜಯಪುರ(ಆಲಮಟ್ಟಿ): ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬೇಕಾಗಿಲ್ಲ. ಒಬ್ಬ ಪೊಲೀಸ್ ಕಾನ್ ಸ್ಟೇಬಲ್ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಬುಧವಾರ ಆಲಮಟ್ಟಿ ಜಲಾಶಯದದ ಬಳಿ ಕೃಷ್ಣಾ ಜಲಧಿಗೆ ಗಂಗಾ ಪೂಜೆ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೂರು ಸಿದ್ದರಾಮಯ್ಯ ಬಂದರೂ ನನ್ನ ಬಂಧಿಸಲು ಆಗಲ್ಲ ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಯಾರನ್ನಾದರೂ ಬಂಧಿಸುವುದು ಪೊಲೀಸ್ ಇಲಾಖೆಯವರೇ ಹೊರತು ನಾನಲ್ಲ. ಕುಮಾರಸ್ವಾಮಿ ಹೆದರಿರುವ ಕಾರಣಕ್ಕಾಗಿ ಇಂದು ಪತ್ರಿಕಾಗೋಷ್ಠಿಯನ್ನು ಮಾಡಿದ್ದಾರೆ. ಪ್ರಕರಣದ ಸಮಗ್ರ ತನಿಖೆಗೆ ಆಯೋಗವನ್ನು ರಚಿಸಲಾಗಿದ್ದು, ಸತ್ಯ ಹೊರಬೀಳುತ್ತದೆ. ಕುಮಾರಸ್ವಾಮಿ ಹೇಳುವುದು ಸತ್ಯವೇ ಎಂಬುವುದು ತನಿಖೆಯಿಂದ ಸ್ಪಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಯಾವುದೇ ವಿಚಾರಣೆ ನಡೆದಿಲ್ಲ, ವರದಿಯಾಗಲಿ, ಪತ್ರವಾಗಲಿ ಅಥವಾ ಆದೇಶವಾಗಲಿ ಇಲ್ಲ. ಆ ಅವಧಿಯಲ್ಲಿ ಪ್ರಭಾವ ಬೀರಲು ನಾನು ಸಿಎಂ ಅಥವಾ ಮಂತ್ರಿಯಾಗಿರಲಿಲ್ಲ. ಕುಮಾರಸ್ವಾಮಿ ಯಾವತ್ತಿದ್ದರೂ ಹಿಟ್ ಅಂಡ್ ರನ್ ಮಾಡುವವರು ಎಂದು ಅವರು ಟೀಕಿಸಿದರು.
ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ತನ್ನ ಬಳಿ ‘ಪೆನ್ ಡ್ರೈವ್’ ಇದೆ ಎಂದರು, ಆದರೆ ಅವರು ಇದುವರೆಗೆ ಮಾಡಿರುವ ಯಾವುದೇ ಆರೋಪಗಳಿಗೆ ತಾರ್ಕಿಕ ಅಂತ್ಯ ಕಂಡಿಲ್ಲ. ತನ್ನ ಬಳಿ ದಾಖಲೆಗಳಿವೆ ಎನ್ನುವ ಕುಮಾರಸ್ವಾಮಿ ಅವುಗಳನ್ನು ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಆಗ್ರಹಿಸಿದರು.
ಸಿದ್ದರಾಮಯ್ಯ ದಾಖಲಾತಿಗಳನ್ನು ತಿದ್ದಿದ್ದಾರೆ ಎಂದು ಕುಮಾರಸ್ವಾಮಿ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ದಾಖಲಾತಿಗಳನ್ನು ತಿದ್ದಿಲ್ಲ. 2014ರ ಪತ್ರದ ಮೇಲೆ ನಿವೇಶನ ಹಂಚಿಕೆಯಾಗಿಲ್ಲ. 2021ರಲ್ಲಿ ಸಲ್ಲಿಸಿದ ಪತ್ರದ ಮೇಲೆ ನಿವೇಶನ ಹಂಚಿಕೆಯಾಗಿದೆ ಎಂದು ಹೇಳಿದರು.
ಅಂದು ಮುಡಾ ಮಂಡಳಿ ಅಧ್ಯಕ್ಷರಾಗಿದ್ದವರು ಬಿಜೆಪಿಯವರು. ಆಗ ಮಂಡಳಿಯಲ್ಲಿದ್ದವರು ಬಿಜೆಪಿ ಹಾಗೂ ಜೆಡಿಎಸ್ ನವರು, ಆಗ ಆದ ನಿವೇಶನ ಹಂಚಿಕೆಗೆ ಯಾರು ಜವಾಬ್ದಾರರು. ಈ ಬಗ್ಗೆ ಆಯೋಗವನ್ನು ರಚಿಸಲಾಗಿದ್ದು, ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ್, ಶಾಸಕರಾದ ಅಪ್ಪಾಜಿ ಸಿ.ಎಸ್.ನಾಡಗೌಡ, ಯಶವಂತರಾಯಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.