ಸಿಎಂ ಸಿದ್ದರಾಮಯ್ಯ ವಿರುದ್ಧ ನ್ಯಾಯಾಲಯಕ್ಕೆ ಮತ್ತೊಂದು ಖಾಸಗಿ ದೂರು

Update: 2024-09-13 12:55 GMT

ಸಿದ್ದರಾಮಯ್ಯ(PTI)

ಬೆಂಗಳೂರು : ಮುಡಾ ಹಗರಣವು ಚರ್ಚೆಯಲ್ಲಿರುವ ನಡುವೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಎನ್.ಆರ್.ರಮೇಶ್ ಅವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮತ್ತೊಂದು ಖಾಸಗಿ ದೂರು ದಾಖಲಿಸಿದ್ದಾರೆ.

ಬಿಬಿಎಂಪಿಗೆ ಉದ್ದೇಶಪೂರ್ವಕವಾಗಿ 68 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ವಂಚಿಸಿರುವ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ಧರಾಮಯ್ಯ ವಿರುದ್ಧ ದೂರು ದಾಖಲಿಸಲಾಗಿದೆ. 2015-2017ರ ಎರಡು ವರ್ಷಗಳ ಅವಧಿಯಲ್ಲಿ ಬಿಬಿಎಂಪಿಯ 493 ಬಸ್ ನಿಲ್ದಾಣಗಳನ್ನು ತಮ್ಮ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗೆಂದು ಬಳಸಿಕೊಂಡು, 68 ಕೋಟಿ ರೂ.ಗಳಲ್ಲಿ ನಯಾಪೈಸೆಯಷ್ಟೂ ಜಾಹಿರಾತು ಶುಲ್ಕ ಪಾವತಿಸದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದಾಖಲೆಗಳ ಸಹಿತ ದೂರುಗಳನ್ನು ದಾಖಲಿಸಲಾಗಿತ್ತು. ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರುಗಳು ದಾಖಲಾದ ನಂತರ ಎಚ್ಚೆತ್ತುಕೊಂಡಿದ್ದ ಬಿಬಿಎಂಪಿಯ ಅಂದಿನ ವಿಶೇಷ ಆಯುಕ್ತರು 12 ಕೋಟಿ ರೂ.ಮೊತ್ತವನ್ನು ಪಾಲಿಕೆಗೆ ಪಾವತಿಸುವಂತೆ ಅಂದಿನ ಸಿದ್ದರಾಮಯ್ಯ ನೇತತ್ವದ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದ್ದರು ಎಂದು ಎನ್.ಆರ್.ರಮೇಶ್ ಹೇಳಿದ್ದಾರೆ.

ಆದರೂ ಸಿದ್ದರಾಮಯ್ಯ ಸರ್ಕಾರ ಈ ನೋಟೀಸ್‌ ನಿರ್ಲಕ್ಷಿಸಿತ್ತು. ಸಿದ್ದರಾಮಯ್ಯನವರು ಎರಡನೇ ಬಾರಿ ಮುಖ್ಯಮಂತ್ರಿಗಳಾದ ನಂತರ, ಅವರ ಪ್ರಭಾವ ಮತ್ತು ಒತ್ತಡಗಳಿಗೆ ಒಳಗಾಗಿದ್ದ ಲೋಕಾಯುಕ್ತ ಪೋಲೀಸರು, ಸಿದ್ದರಾಮಯ್ಯ ಸರ್ಕಾರವು ಬಿಬಿಎಂಪಿ ಗೆ 68,14,90,236 ರೂ.ಮೊತ್ತದ ಜಾಹಿರಾತು ಶುಲ್ಕವನ್ನು ವಂಚಿಸಿದ್ದ ಹಗರಣಕ್ಕೆ ಸಂಬಂಧಿಸಿದಂತೆ ನಾನು ನೀಡಿದ್ದ ದೂರನ್ನು ಯಾವುದೇ ಸೂಚನೆ ನೀಡದೇ ಮುಕ್ತಾಯಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಹಗರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳ ಸಹಿತವಾಗಿ ದೂರನ್ನು ನೀಡಿದ್ದರೂ, ಪಕ್ಷಪಾತ ಧೋರಣೆಯಿಂದ ಮತ್ತು ಸಿದ್ದರಾಮಯ್ಯನವರ ಒತ್ತಡಕ್ಕೆ ಒಳಗಾಗಿ ಪ್ರಕರಣವನ್ನು ಮುಕ್ತಾಯಗೊಳಿಸಿರುವ ಲೋಕಾಯುಕ್ತ ಪೋಲೀಸರ ನಡೆಯನ್ನು ವಿರೋಧಿಸಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸಲಾಗಿದೆ ಎಂದು ಎನ್.ಆರ್.ರಮೇಶ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News