ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಒತ್ತಾಯ ಸಂವಿಧಾನ ವಿರೋಧಿ : ಸಿಎಂ ಸಿದ್ದರಾಮಯ್ಯ
ಬೆಳಗಾವಿ : ಲಿಂಗಾಯತ ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿಗಾಗಿ ಒತ್ತಾಯ ಮಾಡುತ್ತಿರುವುದು ಸಂವಿಧಾನ ವಿರೋಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಪ್ರತಿಪಕ್ಷ ಸದಸ್ಯರು ಪ್ರಸ್ತಾಪಿಸಿದ ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಂವಿಧಾನಿಕವಾಗಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂದರು. ನಮ್ಮ ರಾಜ್ಯದಲ್ಲಿ 2002ರಲ್ಲಿ ಮೀಸಲಾತಿ ವಿಭಾಗ ಆಯಿತು. ಆಗ ಏಕೆ ಪಂಚಮಸಾಲಿ ಸಮುದಾಯ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯ ಹಾಕಲಿಲ್ಲ?, 2021-22ರಲ್ಲಿ ಪಂಚಮಸಾಲಿ ಸಮುದಾಯದ ಮೀಸಲಾತಿ ಎಂದು ಚಳುವಳಿ ಪ್ರಾರಂಭವಾಯಿತು. ಅಂದಿನ ಸರಕಾರದಲ್ಲಿ ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನ ಸಿಗಲಿಲ್ಲವೆಂದು ಈ ಹೋರಾಟ ಪ್ರಾರಂಭ ಮಾಡಿದ್ದು ಎಂದು ಆರೋಪಿಸಿದರು.
ಈ ಹಿಂದೆ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಪ್ರವರ್ಗ 2ಸಿ ಮತ್ತು 2ಡಿ ಎಂದು ಹೊಸ ಮೀಸಲಾತಿ ವ್ಯವಸ್ಥೆ ಜಾರಿ ಮಾಡಿ ಒಕ್ಕಲಿಗರಿಗೂ ಮತ್ತು ಲಿಂಗಾಯತರಿಗೂ ಮುಸ್ಲಿಮ್ ಸಮುದಾಯದ ಶೇ.4ರಷ್ಟು ಮೀಸಲಾತಿ ಕಡಿತ ಮಾಡಿ ತಲಾ ಶೇ.2ರಷ್ಟು ಮೀಸಲಾತಿ ಕೊಟ್ಟಿದ್ದರು. ಇದನ್ನು ವಿರೋಧಿಸಿ ರಾಘವೇಂದ್ರ ಎಂಬವರು ನ್ಯಾಯಾಲಯದಲ್ಲಿ ಪ್ರಕರಣ ಹೂಡಿದ್ದರು. ಆಗ ಬಸವರಾಜ್ ಬೊಮ್ಮಾಯಿ ಸರಕಾರದಲ್ಲಿ ಅಧಿಕಾರಿಯಾಗಿದ್ದ ತುಳಸಿ ಮದ್ದಿನೇನಿ ಅವರು 2002ರಲ್ಲಿ ಆಗಿರುವ ಜಾತಿ ವಿಭಾಗಗಳ ಮೀಸಲಾತಿ ವಿಂಗಡನೆಯನ್ನು ನಾವು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎಂದು ಅಫಿಡವಿಟ್ ಕೊಟ್ಟರು ಎಂದು ಸಿದ್ದರಾಮಯ್ಯ ಅಫಿಡವಿಟ್ ಓದಿ ಹೇಳಿದರು.
ಬಸವರಾಜ್ ಬೊಮ್ಮಾಯಿ ಸರಕಾರ ಮಾಡಿದ 2ಸಿ ಮತ್ತು 2ಡಿ ಯಾವ ಸಂವಿಧಾನ ಎಂದು ಗೊತ್ತಿಲ್ಲ. ಮುಸ್ಲಿಮರ ಶೇ.4ರಷ್ಟು ಮೀಸಲಾತಿ ತೆಗೆದು ಒಕ್ಕಲಿಗ ಮತ್ತು ಲಿಂಗಾಯತರಿಗೆ ನೀಡಿದರು. ಮುಸ್ಲಿಮರ ಶೇ.4ರಷ್ಟು ಮೀಸಲಾತಿ ಏಕೆ ರದ್ದು ಮಾಡಿದರು? ಬೊಮ್ಮಾಯಿ ಸರಕಾರದ 2ಸಿ ಮತ್ತು 2ಡಿ ವರ್ಗ ಮೀಸಲಾತಿ ವಿರೋಧಿಸಿ ಗುಲಾಂ ರಸೂಲ್ ಸುಪ್ರೀಂಕೋರ್ಟ್‍ಗೆ ಹೋದರು. ಅಲ್ಲಿ ಬೊಮ್ಮಾಯಿ ಸರಕಾರ ಮುಂದಿನ ಆದೇಶದವರೆಗೂ 2ಸಿ ಮತ್ತು 2ಡಿ ಮೀಸಲಾತಿ ಜಾರಿ ಮಾಡಲ್ಲವೆಂದು ಅಫಿಡವಿಟ್ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.