ʼಜೈ ಬಾಪು, ಜೈ ಭೀಮ್‌, ಜೈ ಸಂವಿಧಾನʼದ ಐತಿಹಾಸಿಕ ಅಭಿಯಾನವನ್ನು ಅತ್ಯಂತ ಯಶಸ್ವಿ ಮಾಡೋಣ : ಸಿಎಂ ಸಿದ್ದರಾಮಯ್ಯ ಕರೆ

Update: 2025-01-13 10:19 GMT

ಬೆಂಗಳೂರು : ಜೈ ಬಾಪು, ಜೈ ಭೀಮ್, ಜೈ ಸಂವಿಧಾನದ ಐತಿಹಾಸಿಕ ಅಭಿಯಾನವನ್ನು ಅತ್ಯಂತ ಯಶಸ್ವಿ ಮಾಡೋಣ. ಜ.21ರ ಬೆಳಗಾವಿಯ ಚಾರಿತ್ರಿಕ ಸಮಾವೇಷಕ್ಕೆ ಮುನ್ನಡೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಜನತೆಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ, ಬೆಳಗಾವಿಯಲ್ಲಿ ಇದೇ ಜನವರಿ 21 ರಂದು ನಡೆಯಲಿರುವ ಗಾಂಧಿ ಭಾರತ ಕಾರ್ಯಕ್ರಮ ಮತ್ತು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಅಭಿಯಾನದ ಬೃಹತ್ ಸಮಾವೇಶದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಹೋರಾಟ, ತ್ಯಾಗ, ಬಲಿದಾನಗಳಿಂದ ಕಟ್ಟಿದ್ದಾಗಿದೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾದರು. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರು ತಮ್ಮ ಪಾಲಿಗೆ ಒದಗಿ ಬಂದಿದ್ದ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಈ ಆದರ್ಶಗಳ ಮಾರ್ಗದಲ್ಲಿ ನಾವು ಮುನ್ನಡೆಯೋಣ ಎಂದರು.

ಅಂಬೇಡ್ಕರ್, ಗಾಂಧಿ, ನೆಹರೂ ಮತ್ತು ಕಾಂಗ್ರೆಸ್ಸಿನ ಹೋರಾಟದ ಚರಿತ್ರೆಯನ್ನು ನಾವು ಮುಂದಿನ ಪೀಳಿಗೆಗೆ ಅರ್ಥ ಮಾಡಿಸಬೇಕಿದೆ. ನಾವು ಗಾಂಧಿ ವಂಶಸ್ಥರು ಅವರು ಗೋಡ್ಸೆ ವಂಶಸ್ಥರು. ಬಿಜೆಪಿ ಮತ್ತು ಕಾಂಗ್ರೆಸ್ಸಿನ ಈ ಸೈದ್ಧಾಂತಿಕ ವ್ಯತ್ಯಾಸವನ್ನು ಇವತ್ತಿನ ಯುವ ಪೀಳಿಗೆಗೆ ಅರ್ಥೈಸಬೇಕಿದೆ. ಇದಕ್ಕಾಗಿ ಜ.21ರ ಗಾಂಧಿ ಭಾರತ ಸಮಾವೇಷವನ್ನು ಅತ್ಯಂತ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನದ ಬಗ್ಗೆ ಗೌರವ ಇರುವ ಎಲ್ಲರಿಗೂ, ಎಲ್ಲಾ ಪಕ್ಷದವರಿಗೂ ಸಮಾವೇಷಕ್ಕೆ ಸ್ವಾಗತ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಈಶ್ವರ್ ಖಂಡ್ರೆ, ಕೆ.ಜೆ.ಜಾರ್ಜ್, ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹದೇವಪ್ಪ, ಚಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ಶಿವರಾಜ್ ತಂಗಡಗಿ, ಶಿವಾನಂದ ಪಾಟೀಲ್, ಸಂತೋಷ್ ಲಾಡ್, ಆರ್.ಬಿ.ತಿಮ್ಮಾಪುರ, ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್, ವಸಂತ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News