ಕೊಳವೆಬಾವಿಗೆ ಬಿದ್ದ ಮಗುವಿನ ರಕ್ಷಣೆ: ರಕ್ಷಣಾ ಸಿಬ್ಬಂದಿ ಕಾರ್ಯಕ್ಕೆ ಸಿಎಂ ಸಹಿತ ಗಣ್ಯರ ಪ್ರಶಂಸೆ

Update: 2024-04-04 13:11 GMT

ಬೆಂಗಳೂರು: ‘ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್‍ನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಕಾರ್ಯದಕ್ಷತೆ ಪ್ರಶಂಸನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮಗುವಿನ ಕುಟುಂಬದವರ, ನಾಡಿನ ಕೋಟ್ಯಂತರ ಜನರ ಹರಕೆ-ಹಾರೈಕೆಗಳು ಫಲಿಸಿದೆ, ಸಾವನ್ನೇ ಗೆದ್ದು ಬಂದ ಪುಟ್ಟ ಕಂದಮ್ಮ ಮತ್ತೆ ಪೋಷಕರ ಮಡಿಲು ಸೇರಿದ್ದು ಕಂಡು ಖುಷಿಯಾಯಿತು. ನೀರು ಬಾರದ ಅಥವಾ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಯಾರದೋ ಅಮಾಯಕ ಜೀವ ಬಲಿಯಾಗುತ್ತದೆ, ಇಂತಹ ಘಟನೆಗಳು ಕಾಲಕಾಲಕ್ಕೆ ಪುನರಾವರ್ತನೆಯಾಗುತ್ತಿದ್ದರೂ ಜನ ಜಾಗೃತರಾಗದೆ ನಿರ್ಲಕ್ಷ್ಯ ತೋರುವುದು ಬೇಸರದ ಸಂಗತಿ. ಸಮಾಜ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.

ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸಿ ಮೃತ್ಯುಂಜಯನಾಗಿ ಹೊರಬಂದ ಒಂದೂವರೆ ವರ್ಷದ ಮಗು ಚಿ.ಸಾತ್ವಿಕ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಅತ್ಯಂತ ಕಠಿಣ ಮತ್ತು ಸವಾಲಿನದ್ದು ಆಗಿದ್ದ ಈ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ಮಗುವಿನ ಜೀವ ಉಳಿದಿದ್ದು ನನಗೆ ಸಂತಸ ಉಂಟು ಮಾಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯದ ಕೋಟಿ ಕೋಟಿ ಜನರ ಪ್ರಾರ್ಥನೆಗೆ ಫಲ ಸಿಕ್ಕಿದೆ. ದೇವರ ದಯೆಯಿಂದ, ರಕ್ಷಣಾ ಸಿಬ್ಬಂದಿಯ ಶ್ರಮದಿಂದ ಮಗು ಸುರಕ್ಷಿತವಾಗಿ ಹೊರಗೆ ಬಂದಿದೆ. ನಮ್ಮೆಲ್ಲರ ಆತಂಕ ದೂರವಾಗಿದೆ. ರಕ್ಷಣಾ ಸಿಬ್ಬಂದಿಗೆ ನಾನು ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಕೋಟಿ ಕೋಟಿ ಜನರ ಪ್ರಾರ್ಥನೆಯ ಫಲ ಮೃತ್ಯು ಪಂಜರದಿಂದ ಹೊರಬಂದು ಮೃತ್ಯುಂಜಯನಾದ ಸಾತ್ವಿಕ್. ಕೊಳವೆಬಾವಿಯಲ್ಲಿ ಸಿಲುಕಿದ್ದ 2 ವರ್ಷದ ಮಗು ಸಾತ್ವಿಕ್ ಪವಾಡ ಸದೃಶ ರೀತಿಯಲ್ಲಿ ಸುರಕ್ಷಿತವಾಗಿ ಹೊರಬಂದಿರುವುದು ಕೋಟ್ಯಂತರ ಹೃದಯಗಳ ಮಿಡಿತಕ್ಕೆ ಫಲಶೃತಿ ದೊರೆತಂತಾಗಿದೆ. ಸಾತ್ವಿಕ್‍ಗೆ ಸೂಕ್ತ ಚಿಕಿತ್ಸೆ ದೊರೆತು ನೂರಾರುಕಾಲ ಬಾಳಿ ಬದುಕಲೆಂದು ಹಾರೈಸೋಣ. ಮತ್ತೆ ಇಂತಹ ಅವಘಡಗಳು ಎಂದಿಗೂ ಸಂಭವಿಸದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News