ವಿಶ್ವೇಶ್ವರ ಭಟ್‌ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದ ಆಹ್ವಾನಿತರ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು

Update: 2023-07-16 13:37 GMT

ವಿಶ್ವೇಶ್ವರ ಭಟ್‌ (Twitter) / ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪತ್ರಕರ್ತ ವಿಶ್ವೇಶ್ವರ ಭಟ್‌ ಅವರ ಪುಸ್ತಕಗಳ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗುತ್ತಿರುವುದರ ವಿರುದ್ಧ ಅವರ ಅಭಿಮಾನಿಗಳು, ಹಾಗೂ ಪ್ರಗತಿಪರರು ತೀವ್ರ ಆಕ್ಷೇಪವೆತ್ತಿದ್ದಾರೆ.

ಮಹಿಳಾ ವಿರೋಧಿ ವಿಶ್ವೇಶ್ವರ ಭಟ್‌ ಅವರು ಹಲವಾರು ಮಹಿಳೆಯರನ್ನು ಅವಹೇಳನ ಮಾಡಿ ಬರೆದಿದ್ದಾರೆ. ಹಂತಕರ ಗುಂಡೇಟಿಗೆ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಬಲಿಯಾದಾಗ ಅವರ ಬಗ್ಗೆ ಅವಹೇಳನಕಾರಿಯಾಗಿ ಭಟ್‌ ಅವರು ಬರೆದಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೈಬಣ್ಣವನ್ನು ಗೇಲಿ ಮಾಡಿದ್ದನ್ನೂ ನೆನಪಿಸಿದ್ದಾರೆ. ಈ ಹಿಂದೆ ಮಮತಾ ಬ್ಯಾನರ್ಜಿ ಬಗ್ಗೆಯೂ ದ್ವಂದ್ವಾರ್ಥದ ಟ್ವೀಟ್ ಮಾಡಿದ್ದನ್ನೂ ಹಲವರು ಉಲ್ಲೇಖಿಸಿದ್ದಾರೆ.


ಅಂತಹ ವ್ಯಕ್ತಿಯ ಪುಸ್ತಕಗಳ ಬಿಡುಗಡೆಗೆ ಸಿದ್ದರಾಮಯ್ಯನಂತಹವರು ಹೋಗಬಾರದು ಎಂಬ ಕೂಗು ಕೇಳಿ ಬಂದಿದೆ.

ಜುಲೈ 22, 2023 ರಂದು ವಿಶ್ವವಾಣಿ ಪುಸ್ತಕ ಪ್ರಕಾಶನ ಪ್ರಕಟಿಸುತ್ತಿರುವ 6 ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಆಹ್ವಾನಿತರ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಹೆಸರು ಇದೆ. ಆಹ್ವಾನ ಪತ್ರಿಕೆಯನ್ನು ವಿಶ್ವೇಶ್ವರ ಭಟ್‌ ಅವರು ಹಂಚಿಕೊಳ್ಳುತ್ತಿದ್ದಂತೆ ಈ ವಿರೋಧ ವ್ಯಕ್ತವಾಗಿದೆ.

ವಿಶ್ವೇಶ್ವರ್‌ ಭಟ್‌ ಓರ್ವ ಜಾತಿವಾದಿಯಾಗಿದ್ದು, ಸ್ತ್ರೀದ್ವೇಷವನ್ನು ಹೊಂದಿರುವವರು. ದ್ವೇಷ ಹರಡುವ ಪತ್ರಕರ್ತರು. ಅಂತಹವರ ಪುಸ್ತಕಗಳ ಬಿಡುಗಡೆಗೆ ಸಿದ್ದರಾಮಯ್ಯನಂತಹ ಜಾತ್ಯಾತೀತ ನಾಯಕ ಹಾಜರಾಗುವುದು ಸರಿಯಲ್ಲ, ಇದು ಸಮಾಜದಲ್ಲಿ ಬೇರೆಯೇ ಸಂದೇಶವನ್ನು ನೀಡಲಿದೆ ಎಂದು ನಾಡಿನ ಹಲವು ಚಿಂತಕರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಭಟ್‌ ಪುಸ್ತಕ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸದಂತೆ ಆನ್ಲೈನ್‌ನಲ್ಲಿ ಆರಂಭವಾಗಿರುವ ಅಭಿಯಾನದಲ್ಲಿ ಹಲವಾರು ನೆಟ್ಟಿಗರು ಭಾಗಿಯಾಗಿದ್ದು, ವಿಶ್ವೇಶ್ವರ್‌ ಭಟ್‌ ಈ ಹಿಂದೆ ಮಾಡಿದ್ದ ವಿವಾದಾತ್ಮಕ ಟ್ವೀಟ್‌ಗಳನ್ನು, ಅವರ ಕೋಮುವಾದಿ ಬರಹಗಳನ್ನು ಹಂಚಿಕೊಂಡಿದ್ದಾರೆ.

"ತಮ್ಮ ಸರ್ಕಾರದ ಹೆಮ್ಮೆಯ ಮಹಿಳಾ ಸಬಲೀಕರಣ ಯೋಜನೆಗಳನ್ನು ತಾವೇ ಅಣಕಿಸುವಂತೆ, disown ಮಾಡುವಂತೆ ವಿಷಭಟ್ಟನ ಪುಸ್ತಕ ಬಿಡುಗಡೆ ಮಾಡುತ್ತಿರುವ ಸಿದ್ದರಾಮಯ್ಯ. ಇದು ಇಲ್ಲಿನ ಪ್ರಜ್ಞಾವಂತರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಮಾಡುತ್ತಿರುವ ಅವಮಾನ. ಅದೆಲ್ಲಕ್ಕಿಂತ ವಿಷಭಟ್ಟನಂತಹ ಸಂವಿಧಾನ ವಿರೋಧಿಯೊಂದಿಗೆ ವೇದಿಕೆ ಹಂಚಿಕೊಳ್ಳುವುದು ಸಂವಿಧಾನಕ್ಕೆ ಅಗೌರವ ತೋರಿಸಿದಂತೆ. ಸಿದ್ದರಾಮಯ್ಯನವರು ಇದಕ್ಕೆ ಕಾರಣಕರ್ತರಾಗುತ್ತಿದ್ದಾರೆ... ಮು.ಮಂ.ಗಳೇ 'ಅಡಿಕೆಗೆ ಹೋದ ಮಾನ....'" ಎಂದು ಶ್ರೀಪಾದ ಭಟ್‌ ಅವರು ಬರೆದಿದ್ದಾರೆ.

"ವಿಷ ಕಕ್ಕುವ ಭಟ್ಟನ ಕರೆಯೋಲೆಗೆ ಸಮಾಜವಾದಿ ಸಿದ್ದರಾಮಯ್ಯ ಓಗೊಡುತ್ತಿರುವುದು ಅಸಹ್ಯಕರವಾದದ್ದು.. Siddaramaiah ಸರ್ ನಿಮ್ಮನ್ನು ಅಸಂಖ್ಯಾತ ಮಾನವೀಯ ಮನಸ್ಸುಗಳು ಬೆಂಬಲಿಸುತ್ತವೆ ಕಾರಣ ಇಷ್ಟೇ, ನೀವು ಮನುಷ್ಯ ಧರ್ಮವನ್ನು ಎತ್ತಿ ಹಿಡಿಯುವವರು ಎನ್ನುವ ಕಾರಣಕ್ಕೆ.. ಆದರೆ ಈ ನೀಚನ ಕೈಕುಲಕಲು ಮುಂದಾಗುತ್ತಿದ್ದೀರಿ ಅಂದರೆ ನಿಮ್ಮ ಬಗ್ಗೆ ಸಾಕಷ್ಟು ಜನರಿಗೆ ಬೇಸರ ಉಂಟಾಗಿದೆ.. ರಾಜಕಾರಣ ಏನೇ ಇರಲಿ, ಅವನೊಂದಿಗಿನ ಸ್ನೇಹ ಎಂತಹದ್ದೇ ಆಗಿರಲಿ.. ಆದರೆ ನೀವು ಸೈದ್ದಾಂತಿಕವಾಗಿ ರಾಜಿಯಾಗದ ಮನುಷ್ಯ ಎಂದು ಎಲ್ಲರೂ ಭಾವಿಸಿದ್ದೇವು.. ಇಂದು ಎಲ್ಲ ರಾಜಕಾರಣಿಯಂತೇ ನೀವು ಒಬ್ಬರು ಎನ್ನುವಂತೆ ಮಾಡುತ್ತಿದೀರಿ..." ಎಂದು ಪ್ರವೀಣ ಯಳ್ಳಿಗುತ್ತಿ ಎಂಬವರು ಟೀಕಿಸಿದ್ದಾರೆ.

"ಅದೃಷ್ಟವಶಾತ್ ವಿಶ್ವಗುರುಗಳಿಗಿರುವಷ್ಟು ಪ್ರಮಾಣದ ಅಂಧ ಭಕ್ತರು ಸಿದ್ಧರಾಮಯ್ಯನವರಿಗಿಲ್ಲ. ವಿಶ್ವೇಶ್ವರ ಭಟ್ಟರ ಕಾರ್ಯಕ್ರಮಕ್ಕೆ ಹೋಗುವ ವಿಚಾರದಲ್ಲಿ 90% ಅವರ ಬೆಂಬಲಿಗರು ತಿರುಗಿ ಬಿದ್ದಿದ್ದಾರೆ. ಈಗಲೂ ಕೇಳಿಸಿಕೊಳ್ಳದೇ 'ನಡೆದದ್ದೇ ಹಾದಿ' ಎಂದುಕೊಂಡರೆ ಶ್ರೀ ಸಿದ್ಧರಾಮಯ್ಯನವರ ಕಾಲಿಗೊಂದು ಮಾಯದ ವಿಷದ ಮುಳ್ಳು ಚುಚ್ಚಿಕೊಂಡಿತೆಂದೇ ಅರ್ಥ. ಜನರ ಈ ಒತ್ತಾಯವು- ಇದು ಸಮಾಜವಾದ ಹಾಗೂ ಆ ನೆಲೆಯನ್ನು ಹೋಲುವ ಸಿದ್ಧಾಂತದ ಎಳೆಗಳನ್ನು ಅಪ್ಪಿಕೊಂಡ ಸೂಕ್ಷ್ಮ ಜನಗಳ ಬದ್ಧತೆ. ಅದಕ್ಕಾಗಿ ಸಂತಸಪಡೋಣ. ಇದೇ ಸಂದರ್ಭವೆಂದು ನಾನು ಗಮನ ಸೆಳೆಯಲಿಚ್ಛಿಸುವ ಒಂದಂಶವೆಂದರೆ, ಯಾಕೆ ಗೆದ್ದಮೇಲೆ ಬಹುತೇಕ ಮಂದಿ ಹೀಗೆ ಧಾಡಸಿಗಳಾಗುತ್ತಾರೆ? ಅಥವಾ ಅಸೂಕ್ಷ್ಮರಾಗುತ್ತಾರೆ? ಸಿದ್ಧರಾಮಯ್ಯನವರನ್ನು ಬಿಡಿ; ಬೇರೆ ಸಣ್ಣಪುಟ್ಟ ಪೀಠ- ಹುದ್ದೆ- ಗೂಟದ ಕಾರು ಪಡೆದವರೂ ಕೂಡಾ ಒಮ್ಮೆಲೆ ಕೊಂಬು ಕೋಡು ಮೂಡಿಸಿಕೊಂಡು ಮುಖದ ಸ್ನಾಯು ಹಿಡಕೊಂಡವರಂತಾಡುತ್ತಾರೆ?! ನಾವು ಮಾದರಿಯೆಂದು ಅದುವರೆಗೆ ಗ್ರಹಿಸಿದ್ದ- ಪ್ರೀತಿಸಿದ್ದ ಎಷ್ಟೋ ಮಂದಿ ಹುದ್ದೆ ಒಂದು ಸಿಕ್ಕಾಕ್ಷಣ, ಹಾದಿ ನಡೆಯುವಾಗ ಅಚಾನಕ್ಕಾಗಿ ಮೈಗೆ ಬಿದ್ದ ಕಾಡು ಹುಳದಂತೆ ನಮ್ಮನ್ನು ಇಶ್ಶೀ ಎಂಬಂತೆ ಮಿಡಿದು ಅತ್ತ ತೆರಳುತ್ತಾರೆ? ವಿಚಾರಗಳು ತುಂಬಿಕೊಳ್ಳುವುದು ಅಂದರೆ ಮನುಷ್ಯ ರಾಗದ್ವೇಷಗಳನ್ನು ನಿವಾರಿಸಿಕೊಂಡು ಖಾಲಿಯಾಗುವುದು ಎಂದರ್ಥವಲ್ಲವೇ? 'ಏರುವುದು' ಎಂದರೆ 'ಇಳಿಯುವುದು' ಎಂದರ್ಥವಲ್ಲವೇ? 'ಖಾಲಿಯಾಗುವುದು' ಅಂದರೆ 'ಹೊಂದುವುದು' ಎಂಬರ್ಥವಲ್ಲವಾ? ನಾನು ಗ್ರಹಿಸಿರುವುದು ಹೀಗೆ! ಸಾಮಾನ್ಯವಾಗಿ ತೀರಾ ಆತ್ಮೀಯರಾಗಿದ್ದವರನ್ನೂ ಕೂಡಾ ಅವರು ಯಾವುದೇ ಹುದ್ದೆ ಸ್ಥಾನಮಾನ ಹೊಂದಿದ ಕೂಡಲೇ ಅವರಿಂದ ತುಸು ದೂರ ಸರಿದು ನಿಲ್ಲುವುದು ನನ್ನಂಥ ಅಕ್ಸೆಂಟ್ರಿಕ್‌ಗಳ ಜಾಯಮಾನ. ಸಣ್ಣಕೆ ನಕ್ಕರೂ ಕಣ್ಣು ಆಗಸಕ್ಕೆ ಬಿಸಾಕುವ ಸಣ್ಣದೊಂದು ಸೂಕ್ಷ್ಮ ಗೆಶ್ಚರ್ ಕಣ್ಣಿಗಿಡುಕಿದರೂ ಮತ್ತೆ ನಾನವರಿಂದ ಶಾಶ್ವತ ದೂರ. ಈ ಆವೇಶ ತುಂಬ ದುರದೃಷ್ಟಗಳನ್ನು ತಂದುಕೊಡುತ್ತೆ- ಅವಕಾಶಗಳಿಂದ ನಮ್ಮನ್ನು ವಂಚಿತರಾಗಿಸುತ್ತದೆ ಅಂತ ಗೊತ್ತಿದ್ದರೂ ನಾನಂತೂ ಹೀಗೆಯೇ. ತತ್‌ಪರಿಣಾಮವೇ ನಮ್ಮಂಥವರ ಈಗಿನ ಸ್ಥಿತಿ! ಇಂಥ ವಿಚಾರಗಳನ್ನು ನೆನೆಯುವಾಗಲೆಲ್ಲ ಹಿರಿಯ ಚಿಂತಕರಾದ ಜಿ. ರಾಜಶೇಖರರ ಕಡೆದಿನಗಳು ಮತ್ತು ಸಾವು ನಮ್ಮಂಥವರನ್ನು ತಟ್ಟುವುದು. ಒಂದಿಷ್ಟಾದರೂ ಎದೆ ಚುಚ್ಚುವುದು! ಅದಿಲ್ಲದಿದ್ದರೆ ನಾವೂ ಯಾವುದೇ ರಾಜಕಾರಣಿಗಳಿಗಿಂತ ಕಡಿಮೆಯಿಲ್ಲದ ನೈತಿಕ ಭ್ರಷ್ಟರಾಗುತ್ತೇವಷ್ಟೆ. ಲೇಖಕ ಸಾದತ್ ಹಸನ್ ಮಾಂಟೋ ಬದುಕಿರುವಷ್ಟೂ ಸಮಯ ಸತ್ತಂತಿದ್ದ. ಮತ್ತು ಸತ್ತ ಮರುಕ್ಷಣದಿಂದ ಸಾವಿರಾರು ವರ್ಷಗಳ ಕಾಲ ಸಾರ್ಥಕವಾಗಿ ಬದುಕುವಂತಾದ!" ಎಂದು ವ್ಯಂಗ್ಯಚಿತ್ರಕಾರ ದಿನೇಶ್‌ ಕುಕ್ಕುಜಡ್ಕ ಅವರು ಬರೆದಿದ್ದಾರೆ.

"ಚುನಾವಣೆ ನಡೀವಾಗ ಆ ಸುರ್ಜೆವಾಲಾ ಈ ವಿಷ ಬಟ್ಟನ ಮನೆಗೇ ಹೋಗ್ತಾರೆ... ಅದಾದ ಎರಡನೇ ದಿನವೇ ರಾಹುಲ್ ಗಾಂದಿಯನ್ನ ಅವಹೇಳನ‌ ಮಾಡಿ ಈ ಬಟ್ಟ ಬರೀತಾನೆ... ಮತ್ತೆ ಇದೀಗ ಸಿದ್ದರಾಮಯ್ಯ ಇವನ ಪುಸ್ತಕ ಬಿಡುಗಡೆ ಮಾಡ್ತಾರಂತೆ!! ಸಮಯಸಾದಕ ಬಟ್ಟನ ಮೇಲೆ‌ ಯಾಕಿಶ್ಟು ಲವ್ವು? ಈ ಬಟ್ಟ ಸಿದ್ದರಾಮಯ್ಯ ಅವರನ್ನು ಯಾರೆಲ್ಲಾ ನಕಶಿಕಾಂತ‌ ದ್ವೇಶಿಸುತ್ತಾ ಕಾರಿಕೊಳ್ಳಿತ್ತಿದ್ದರೋ ಅಂತವರನ್ನೇ ಹುಡುಕಿ ಹುಡುಕಿ ಅಂಕಣ ಬರೆಸಿದ್ದು ತಿಳಿದೂ ತಿಳಿದೂ ಕ್ರೆಡಿಬಿಲಿಟಿ ಕೊಡುವುದೆ" ಎಂದು ಹರ್ಷಕುಮಾರ್ ಕುಗ್ವೆ ಬರೆದಿದ್ದಾರೆ.

 

"ಬಾಯಾಗ್ ಸೆಕ್ಯುಲರ್, ಸರ್ವ ಜನಾಂಗದ ಶಾಂತಿಯ ತೋಟ ಇತ್ಯಾದಿ ಇತ್ಯಾದಿ... ಬಗ್ಲಾಗ್ ಇಶಬಟ್.... ನಿಮಗೆಲ್ಲರಿಗೂ ಅವತ್ತೇ ಸಲಾಮ್ ಹೇಳಿ ರುಣ ಮುಗಿಸಿದಿನಿ... ಇನ್ನು ಏನ್ರಾಪ್ಪ ನಿಮ್ಮ ಪ್ರಾಬ್ಲಮ್ ಅಂತ ಟ್ವಿಟ್ ಮಾಡೇ ಮಾಡುತ್ತಾರೆ... ನೋಡತ ಇರಿ..." ಎಂದು ನಾಗೇಗವ್ಡ ಕೀಲಾರ ಶಿವಲಿಂಗಯ್ಯ ಎಂಬವರು ಬರೆದಿದ್ದಾರೆ.

 

 

 

ಈ ಕುರಿತು ಪ್ರತಿಕ್ರಿಯಿಸಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, “ಜಾತ್ಯಾತೀತತೆಗೆ ಬದ್ದರಾಗಿರುವುದು, ಸಮಾಜವಾದದ ಹಳೆಯ ದಿನಗಳ ನೆನಪುಗಳನ್ನು‌ ಉಳಿಸಿಕೊಂಡು ಕೆಲಸ ಮಾಡುವುದು ಅಂದರೆ ಕೋಮುಶಕ್ತಿಗಳನ್ನು ಹುಡುಕಿ ಹುಡುಕಿ ದೂರ ಇಡುವುದು. ಇದು ಪ್ರಥಮ ಕೆಲಸ.ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಷ್ಟೂ ತಿಳುವಳಿಕೆ ಇಲ್ಲ ಅಂತ ನಾನಂತೂ ಭಾವಿಸುವುದಿಲ್ಲ. ಸಿದ್ದರಾಮಯ್ಯರಿಗೆ ಮರೆತಿದ್ದರೆ ಅದನ್ನು ನೆನಪಿಸುವುದು ಅವರನ್ನು ಭೇಟಿಯಾಗಿಯೊ, ಕರೆಸಿಯೋ ಅಭಿನಂದನೆಗಳನ್ನು ಸಲ್ಲಿಸಿದ, ಸಂವಾದ ನಡೆಸಿದ ಬರಹಗಾರರು, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಚಿಂತಕರ ಜವಾಬ್ದಾರಿ. ಅಷ್ಟು ಮಾಡಲಾಗದಿದ್ದರೆ ವರ್ತಮಾನ ನಿಮ್ಮನ್ನು ನೋಡುವ ಬಗೆಯೇ ಬೇರೆ ಇರುತ್ತದೆ.” ಎಂದು ಎಚ್ಚರಿಸಿದ್ದಾರೆ.

ಲೇಖಕ ರಂಜಾನ್‌ ದರ್ಗಾ ಅವರು ಪ್ರತಿಕ್ರಿಯಿಸಿ, “ನೆಹರೂ ಅವರು ಸಿಟ್ಝರ್ಲೆಂಡಿಂದ ಭಾರತಕ್ಕೆ ಬರುವಾಗ ರೊಮ್ ಏರ್ಪೋರ್ಟಲ್ಲಿ ಇಳಿದು ಪ್ರಯಾಣ ಮುಂದುವರಿಸಬೇಕಿತ್ತು. ಆ ಸಂದರ್ಭದಲ್ಲಿ ಇಟಲಿಯ ಫ್ಯಾಸಿಸ್ಟ್ ಮುಸೋಲಿನಿ ಭೇಟಿಯಾಗ ಬಯಸಿದ. ನೆಹರೂ ಅವರು ಒಪ್ಪಲಿಲ್ಲ. ಬರಿ ಕೈ ಕುಲುಕಲು ಬರುವುದಾಗಿ ಮತ್ತೆ ಹೇಳಿಕಳಿಸಿದ. ನೆಹರೂ ಅದಕ್ಕೂ ಒಪ್ಪಲಿಲ್ಲ. ಒಬ್ಬ ಫ್ಯಾಸಿಸ್ಟನ ಕೈಕುಲುಕಿದರೆ ಅದು ಜಗತ್ತಿನ ಮೇಲೆ ಯಾವ ದುಷ್ಪರಿಣಾಮ ಬೀರಬಹುದು ಎಂಬ ಪರಿಜ್ಞಾನ ನೆಹರೂ ಅವರಿಗೆ ಇತ್ತು.” ಎಂದು ಅವರು ಬರೆದಿದ್ದಾರೆ.

ಇನ್ನು ಹಲವು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಅವರು ಹೋಗಲೇ ಬಾರದು. ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೆ ಸಿಎಂ ಸಿಗೋದು ಕಷ್ಟವಾಗಿದೆ , ಆದರೆ ಇಂತಹವರ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Full View

Full View

Full View

Full View

Full View

Full View

 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News