ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆ ಪರಿಹರಿಸಲು ಬದ್ಧ: ಸಚಿವ ದಿನೇಶ್ ಗುಂಡೂರಾವ್

Update: 2023-11-05 16:37 GMT

ಬೆಂಗಳೂರು, ನ.5: ಶಾಸಕ ವೇದವ್ಯಾಸ್ ಕಾಮತ್ ಅವರೇ, ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆ ಕಾಂಗ್ರೆಸ್ ಸರಕಾರ ಸೃಷ್ಟಿ ಮಾಡಿರುವುದಲ್ಲ. ನಾಲ್ಕು ವರ್ಷಗಳಿಂದ ನಿಮ್ಮದೇ ‘ಡಬಲ್ ಇಂಜಿನ್’ ಸರಕಾರವಿತ್ತು. ಶಾಸಕರು, ಸಚಿವರು, ಸಂಸದರು ಬಿಜೆಪಿಯವರೆ ಆಗಿದ್ದರು. ನಿಮ್ಮ ಅವಧಿಯಲ್ಲೆ ನಿಮಗೆ ಮರಳು ಗಣಿಗಾರಿಕೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಜನರ ಮುಂದೆ ನೂರು ಬಾರಿ ಸುಳ್ಳು ಹೇಳಿ, ಅದೇ ಸತ್ಯ ಎಂಬಂತೆ ಬಿಂಬಿಸುವ ಚಾಳಿ ನಿಮ್ಮದು. ಅಧಿಕಾರ ಸಿಕ್ಕಾಗ ದೋಚಿದ್ದು ಬಿಟ್ಟರೆ ದೂರದೃಷ್ಠಿಯ ಒಂದೂ ಕೆಲಸ ಮಾಡಿಲ್ಲ. ಈಗ ದಿಢೀರನೆ ಗಾಢ ನಿದ್ದೆಯಿಂದ ಎಚ್ಚೆತ್ತು, ಕಾಂಗ್ರೆಸ್ ದೂರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.

ನಿಮ್ಮದೇ ಸರಕಾರದ ಅವಧಿಯಲ್ಲಿ ರಾಜ್ಯದ ತಾಲೂಕು ಆಸ್ಪತ್ರೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಯಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿತ್ತು. ಆದರೆ ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೇರಿದ ಬಳಿಕ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಹೊಸ ಡಯಾಲಿಸಿಸ್ ಯಂತ್ರಗಳ ಪೂರೈಕೆ ಮತ್ತು ನಿರ್ವಹಣೆಗಾಗಿ ಹೊಸ ಟೆಂಡರ್ ಕರೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ನಿಮ್ಮ ರಾಜಕೀಯ ಸೇಡಿನ ಆರೋಪದ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆಯನ್ನು ಪರಿಹರಿಸಲು ನಮ್ಮ ಕಾಂಗ್ರೆಸ್ ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News