ಸುದ್ದಿ ನಿರೂಪಣೆಯಲ್ಲಿ ‘ಪಾಕಿಸ್ತಾನದ ಧ್ವಜ’ ಬಳಕೆ : ಸುವರ್ಣ ನ್ಯೂಸ್ ವಿರುದ್ಧ ದೂರು ದಾಖಲು

Update: 2024-05-11 14:55 GMT

ಬೆಂಗಳೂರು : ಸುದ್ದಿ ನಿರೂಪಣಾ ಕಾರ್ಯಕ್ರಮವೊಂದರಲ್ಲಿ ಹಿಂದೂಗಳಿಗೆ ತ್ರಿವರ್ಣ ಧ್ವಜ ಮತ್ತು ಮುಸ್ಲಿಮರಿಗೆ ಪಾಕಿಸ್ತಾನದ ಧ್ವಜ ಬಳಕೆ ಮಾಡಿರುವ ಖಾಸಗಿ ಸುದ್ದಿ ವಾಹಿನಿ ಮತ್ತು ಅದರ ಸಂಪಾದಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಂಪತ್‍ಕುಮಾರ್ ಪಿ. ಎಂಬುವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಮೇ 9ರ ರಾತ್ರಿ 8.30ರಲ್ಲಿ ಏಷ್ಯಾ ನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿಯಲ್ಲಿ ಪ್ರಸಾರಗೊಂಡಿರುವ ಕಾರ್ಯಕ್ರಮದ ಸುದ್ದಿ ನಿರೂಪಣೆ ವೇಳೆಯಲ್ಲಿ ಪತ್ರಕರ್ತ ಅಜಿತ್ ಹನಮಕ್ಕನವರ್ ಹಿಂದೂಗಳ ಜನಸಂಖ್ಯೆ ತಿಳಿಸಲು ತ್ರಿವರ್ಣ ಧ್ವಜ. ಭಾರತೀಯ ಮುಸ್ಲಿಮರ ಜನಸಂಖ್ಯೆಯನ್ನು ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪತ್ರಕರ್ತ ಅಜಿತ್ ಹನಮಕ್ಕನವರ್ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ವರದಿಯನ್ನು ಚರ್ಚಿಸುವಾಗ 20 ಕೋಟಿ ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನದ ಧ್ವಜ ಬಳಸಿ ಸುದ್ದಿ ಪ್ರಸಾರ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ವ್ಯಾಪಕವಾಗಿ ಪ್ರಚಾರವಾಗಿದ್ದು, ದೇಶದ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಷಡ್ಯಂತ್ರವಾಗಿದೆ. ಪಾಕಿಸ್ತಾನದ ಧ್ವಜ ಬಳಸಿ ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಪ್ರಚೋದಿಸುವ ಸುದ್ದಿ ಪ್ರಸಾರ ಮಾಡಿ ದೇಶದ ಸಾರ್ವಭೌಮತೆ ಮತ್ತು ಐಕ್ಯತೆಗೆ ಧಕ್ಕೆ ತಂದಿರುವ ಅಜಿತ್ ಹನುಮಕ್ಕನವರ್ ಮತ್ತು ಸುವರ್ಣ ಸುದ್ದಿವಾಹಿನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News