ಸಹಕಾರ ಬ್ಯಾಂಕುಗಳ ಸಾಲದಲ್ಲಿ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿ ಮನ್ನಾ: ಸಿಎಂ ಸಿದ್ದರಾಮಯ್ಯ
ಬೆಳಗಾವಿ: ʼಸಹಕಾರ ಬ್ಯಾಂಕುಗಳಲ್ಲಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲಾಗುವುದುʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಲಮನ್ನಾ ಮಾಡುವ ಕುರಿತು ನಾವು ಪ್ರಣಾಳಿಕೆಯಲ್ಲಿ ಹೇಳಿಲ್ಲ. ಬಿಜೆಪಿಯವರು 2018ರ ಪ್ರಣಾಳಿಕೆಯಲ್ಲಿ ರಾಷ್ಟ್ರೀಕೃತ ಬ್ಯಾಂಕು ಮತ್ತು ಸಹಕಾರಿ ಸಂಘಗಳಲ್ಲಿ ಇರುವ 1ಲಕ್ಷ ರೂ. ವರೆಗಿನ ರೈತರ ಬೆಳೆ ಸಾಲಮನ್ನಾ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಬಿಜೆಪಿಯವರು ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಅವರು ಟೀಕಿಸಿದರು.
‘ರಾಜ್ಯದ ಹಿಂದುಳಿದ, ಅತಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ತಾಲೂಕುಗಳನ್ನು ಗುರುತಿಸಿ, ಅವುಗಳ ಅಭಿವೃದ್ಧಿಗೆ ಶಿಫಾರಸು ಮಾಡಿದ್ದ ನಂಜುಂಡಪ್ಪ ವರದಿಯ ಅನುಷ್ಠಾನ ಹಾಗೂ ಅದರ ಫಲಶ್ರುತಿಯನ್ನು ಅಧ್ಯಯನ ಮಾಡಿ ಸರಕಾರಕ್ಕೆ ವರದಿ ನೀಡಲು ನುರಿತ ಅರ್ಥಶಾಸ್ತ್ರಜ್ಞರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಶುಕ್ರವಾರ ಉತ್ತರಿಸಿದ ಅವರು, ನಂಜುಂಡಪ್ಪ ವರದಿ ಸಲ್ಲಿಕೆಯಾಗಿ 21 ವರ್ಷಗಳಾಗಿದೆ. ಆ ವರದಿಯನ್ನಾಧರಿಸಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಇದುವರೆಗೆ 61,330 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಸುಮಾರು 42ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.
ನಂಜುಂಡಪ್ಪ ವರದಿಯನ್ನಾಧರಿಸಿ ನೀಡಲಾಗುವ ವಿಶೆಷ ಅಭಿವೃದ್ಧಿ ಯೋಜನೆಯಡಿಯೆ 32,433.43 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇದರ ಜೊತೆಯಲ್ಲಿ ಬಯಲು ಸೀಮೆ ಅಭಿವೃದ್ಧಿ ಮಂಡಳಿ ವತಿಯಿಂದಲೂ ಅನುದಾನಗಳನ್ನು ಒದಗಿಸಲಾಗಿದೆ. ಇಷ್ಟೆಲ್ಲ ಮಾಡಿದರೂ ಮಾನವ ಅಭಿವೃದ್ಧಿ ಸೂಚ್ಯಂಕವು ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಶಿಕ್ಷಣ, ಆರೋಗ್ಯ, ಆದಾಯಗಳಿಕೆ ಮುಂತಾದವುಗಳಲ್ಲಿ ಹಿನ್ನಡೆಯನ್ನು ಈ ಜಿಲ್ಲೆಗಳು ಅನುಭವಿಸುತ್ತಿವೆ. ಹಾಗಾಗಿ ವಿಶೇಷವಾಗಿ ನಂಜುಂಡಪ್ಪ ವರದಿಯ ಅನುಷ್ಠಾನ ಹಾಗೂ ಅದರ ಫಲಶ್ರುತಿಯನ್ನು ಅಧ್ಯಯನ ಮಾಡಲು ನುರಿತ ಅರ್ಥಶಾಸ್ತ್ರಜ್ಞರೊಬ್ಬರ ಅಧ್ಯಕ್ಷತೆಯಲ್ಲಿ ಹೈಪವರ್ ಕಮಿಟಿ(ಉನ್ನತಾಧಿಕಾರ ಸಮಿತಿ)ಯನ್ನು ರಚಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಲು ಹಾಗೂ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಸಲುವಾಗಿ ಬೆಳಗಾವಿ ಸಮೀಪ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ, 500 ಎಕರೆ ಪ್ರದೇಶದಲ್ಲಿ ಫೌಂಡ್ರಿ ಕ್ಲಸ್ಟರ್ ಅನ್ನು ಸ್ಥಾಪಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಏರೋಸ್ಪೇಸ್ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕಾ ಕ್ಲಸ್ಟರ್ ಅನ್ನು ಸ್ಥಾಪಿಸಲಾಗುತ್ತಿದ್ದು, ಈಗಾಗಲೇ 19 ಘಟಕಗಳು 1255 ಕೋಟಿ ರೂ.ಬಂಡವಾಳ ಹೂಡಿಕೆ ಮಾಡುತ್ತಿದ್ದು, ಸುಮಾರು 2450 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಅಲ್ಲದೇ, ಧಾರವಾಡದ ಸಮೀಪ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ರಾಯಚೂರಿನಲ್ಲಿ ಹತ್ತಿ ಉತ್ಪಾದನೆಯು ಹೆಚ್ಚಿರುವುದರಿಂದ ಈ ಜಿಲ್ಲೆಯಲ್ಲಿ ಆರ್ಥಿಕ ಅಭಿವೃದ್ಧಿ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ದೃಷ್ಠಿಯಿಂದ ಹತ್ತಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಒತ್ತು ನೀಡಲಾಗುವುದು. ವಿಜಯಪುರದಲ್ಲಿ ಉತ್ಪಾದನಾ ಕ್ಲಸ್ಟರ್ ಅನ್ನು ಅಂದಾಜು 1500 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಉತ್ತರ ಕರ್ನಾಟಕವು ಸಮೃದ್ಧ ಪ್ರವಾಸೋದ್ಯಮಗಳ ತಾಣವಾಗಿದೆ. ಐತಿಹಾಸಿಕ ಮಹತ್ವವಿರುವ ಈ ತಾಣಗಳು ಅಂತರ್ ರಾಷ್ಟ್ರೀಯವಾಗಿಯೂ ಮಹತ್ವ ಪಡೆದಿವೆ. ಆದರೆ ಇದಕ್ಕೆ ಸಾಕಷ್ಟು ಮಹತ್ವ ನೀಡದೆ ಹಿನ್ನಡೆಯನ್ನು ಅನುಭವಿಸುತ್ತಿದೆ. ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ಸಮಗ್ರ ಕ್ರಿಯಾಯೋಜನೆಯನ್ನು ರೂಪಿಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕ್ರಮವಹಿಸುತ್ತೇವೆ ಎಂದು ಅವರು ಹೇಳಿದರು.
ಧಾರವಾಡದಲ್ಲಿರುವ ವಾಲ್ಮಿ(ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ)ಯನ್ನು ಉನ್ನತೀಕರಿಸಲಾಗುವುದು. ಇದನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ವಾಟರ್ ಮ್ಯಾನೇಜ್‍ಮೆಂಟ್ ಅನ್ನಾಗಿ ಬದಲಾಯಿಸಿ ಇದರ ಮೂಲಕ ಜಲ ಶಿಕ್ಷಣ ನೀಡುವುದಷ್ಟೇ ಅಲ್ಲ, ಉತ್ತರ ಕರ್ನಾಟಕದ ಮಣ್ಣಿನ ಸವುಳು-ಜವುಳು ಸಮಸ್ಯೆಯನ್ನು ನಿರ್ವಹಿಸಲಾಗುವುದು. ಹಾಗೂ ರೈತರ ಆದಾಯ ಹೆಚ್ಚಳದ ಕಡೆಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ ಈ ಬಾರಿ 42 ಜನ ಶಾಸಕರು ಪಾಲ್ಗೊಂಡಿದ್ದರು. ಒಟ್ಟು 11 ಗಂಟೆ 4 ನಿಮಿಷ ಚರ್ಚೆ ನಡೆದಿದೆ. ಅನೇಕ ಜನ ಶಾಸಕರು ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ತಮ್ಮ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಈ ಪೈಕಿ ಕಾಂಗ್ರೆಸ್ ಪಕ್ಷದ 24, ಬಿಜೆಪಿಯ 15 ಹಾಗೂ ಜೆಡಿಎಸ್ ಪಕ್ಷದ ಇಬ್ಬರು ಮತ್ತು ಪಕ್ಷೇತರ ಸದಸ್ಯರೊಬ್ಬರು ಮಾತನಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡೋಣ. ಆದರೆ, ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ನಾವೆಲ್ಲ ಸೇರಿ 7 ಕೋಟಿ ಕನ್ನಡಿಗರ ಬಗ್ಗೆ ಆಲೋಚಿಸಬೇಕು. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಧರಣಿ: ‘ರಾಜ್ಯ ಸರಕಾರವು ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದರಿಂದ ತಾರತಮ್ಯ ನಿವಾರಿಸುವುದಾಗಿ ಹೇಳಿದೆ. ಆದರೆ, ಇದು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇರುವುದರಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಹೆಕ್ಟೇರ್ ಗೆ 25 ಸಾವಿರ ರೂ.ಪರಿಹಾರ ನೀಡಬೇಕು. ರೈತರ ಎರಡು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದೆವು. ಆದರೆ, ಸರಕಾರ ಇದ್ಯಾವುದಕ್ಕು ಮುಖ್ಯಮಂತ್ರಿಯ ಉತ್ತರದಲ್ಲಿ ಸ್ಪಷ್ಟಣೆ ಕೊಟ್ಟಿಲ್ಲ ಎಂದು ಆರೋಪಿಸಿ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.
‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಮಾಡುತ್ತೇವೆ. ಈ ಬಗ್ಗೆ ಸಂಶಯ ಪಡುವ ಅಗತ್ಯವಿಲ್ಲ. ಸದನದ ಮೊದಲನೆ ಐದು ದಿನ ಅರ್ಥ ಪೂರ್ಣವಾಗಿ ಚರ್ಚೆಗಳು ನಡೆದಿರಲಿಲ್ಲ. ಆದರೆ, ಈ ವಾರ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಪಾಲ್ಗೊಂಡು ಚರ್ಚೆಯಲ್ಲಿ ಭಾಗವಹಿಸುವಂತೆ ಆಯಿತು. ಇದಕ್ಕಾಗಿ ಸಭಾಧ್ಯಕ್ಷರಿಗೆ ಹಾಗೂ ಎಲ್ಲ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ’
-ಸಿದ್ದರಾಮಯ್ಯ, ಮುಖ್ಯಮಂತ್ರಿ