ಕೆಎಸ್ಸಾರ್ಟಿಸಿ ಬಸ್ ನಲ್ಲಿ ತೃತೀಯ ಲಿಂಗಿಗೆ ಟಿಕೆಟ್ ನೀಡುವಲ್ಲಿ ಗೊಂದಲಕ್ಕೀಡಾದ ಕಂಡಕ್ಟರ್
ಯಾದಗಿರಿ: ಪುರುಷರ ಬಟ್ಟೆ ಧರಿಸಿ ಬಂದಿದ್ದ ತೃತೀಯ ಲಿಂಗಿಯೊಬ್ಬರಿಗೆ ಟಿಕೆಟ್ ನೀಡಲು ಬಸ್ ಕಂಡಕ್ಟರ್ ಗೊಂದಲಕ್ಕೀಡಾದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಶಹಾಪುರ ತಾಲೂಕಿನ ತಡಬಿಡಿ ಗ್ರಾಮದ ತೃತೀಯ ಲಿಂಗಿ ಲಕ್ಷ್ಮೀ ಎಂಬವರು ರಾಯಚೂರಿನಿಂದ ಯಾದಗಿರಿಗೆ ತೆರಳುತ್ತಿದ್ದ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಲಕ್ಷ್ಮೀ ಫ್ರೀ ಟಿಕೆಟ್ ಕೇಳಿದಾಗ ಕಂಡಕ್ಟರ್ ಆಧಾರ್ ಕಾರ್ಡ್ ನೋಡಿ ಗೊಂದಲಕ್ಕಿಡಾಗಿದ್ದಾರೆ ಎನ್ನಲಾಗಿದೆ.
ಆಧಾರ್ ಕಾರ್ಡ್ ನಲ್ಲಿ ಲಕ್ಷ್ಮೀ ಎಂಬ ಹೆಸರಿದ್ದು, ಲಿಂಗದ ಜಾಗದಲ್ಲಿ ಪುರುಷ ಎಂದು ಉಲ್ಲೇಖಿಸಲಾಗಿತ್ತು. ಜೊತೆಗೆ ಲಕ್ಷ್ಮೀ ಪುರುಷರ ಬಟ್ಟೆ ಧರಿಸಿದ್ದರಿಂದ ನಿರ್ವಾಹಕ ಗೊಂದಲಕ್ಕೀಡಾದ್ದರು ಎಂದು ತಿಳಿದು ಬಂದಿದೆ.
ನಾನು ಮಹಿಳೆಯರ ಬಟ್ಟೆ ಹಾಕಿಕೊಳ್ಳಲ್ಲ. ಯಾವಾಗಲೂ ಪುರುಷರ ಬಟ್ಟೆನೇ ಧರಿಸುತ್ತೇನೆ ಎಂದು ಲಕ್ಷ್ಮೀ ತಿಳಿಸಿದಾಗ ಮನವರಿಕೆ ಮಾಡಿಕೊಂಡ ಕಂಡಕ್ಟರ್ ಶಕ್ತಿ ಯೋಜನೆಯಡಿ ಫ್ರೀ ಟಿಕೆಟ್ ಕೊಟ್ಟು ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.