ಜೆಡಿಎಸ್ ತನ್ನ ಸೈದ್ಧಾಂತಿಕ ನಿಲುವನ್ನು ಸ್ಪಷ್ಟಪಡಿಸಿದ್ದಕ್ಕೆ ಅಭಿನಂದನೆಗಳು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಜಾತ್ಯತೀತ ಜನತಾ ಪಕ್ಷ ಎನ್ನುವುದು "ಬಿಜೆಪಿಯ ಬಿ ಟೀಮ್" ಎಂದು ಹಿಂದಿನಿಂದಲೇ ನಾನು ಹೇಳಿಕೊಂಡು ಬಂದಿದ್ದೇನೆ. ನನ್ನ ಮಾತನ್ನು ಒಪ್ಪಿಕೊಂಡು ತಮ್ಮ ಸೈದ್ದಾಂತಿಕ ನಿಲುವನ್ನು ಸ್ಪಷ್ಟಪಡಿಸಿದ್ದಕ್ಕೆ ಜೆಡಿಎಸ್ ಪಕ್ಷವನ್ನು ಅಭಿನಂದಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ʼಜೆಡಿಎಸ್ ಪಕ್ಷದ ಜಾತ್ಯತೀತ ಮುಖವನ್ನು ನಿಜ ಎಂದು ನಂಬಿ ಒಂದಷ್ಟು ಸೆಕ್ಯುಲರ್ ಮತದಾರರು ದಾರಿತಪ್ಪುವುದನ್ನು ಜೆಡಿಎಸ್ ಪಕ್ಷದ ಈ ನಿಲುವು ತಪ್ಪಿಸಿದೆ. ಇದು ಮುಂದಿನ ಚುನಾವಣೆಯನ್ನು ಜಾತ್ಯತೀತ ಮತ್ತು ಕೋಮುವಾದಿ ಶಕ್ತಿಗಳ ನಡುವಿನ ನೇರ ಸಂಘರ್ಷವಾಗಿ ಪರಿವರ್ತಿಸಿದೆ. ಜಾತ್ಯತೀತತೆ ಮತ್ತು ಸೌಹಾರ್ದತೆ ಪರಂಪರೆಯ ಕರ್ನಾಟಕದ ಮತದಾರರು ಮುಂದಿನ ಚುನಾವಣೆಗಳಲ್ಲಿ ಸರಿಯಾದ ಆಯ್ಕೆ ಮಾಡಲಿದ್ದಾರೆʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಜಾತ್ಯತೀತ ಜನತಾದಳ ಅಂತ್ಯವಾಗಬಾರದು ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಅದೇ ರೀತಿ ಎಚ್.ಡಿ ದೇವೇಗೌಡ ಅವರು ಇನ್ನಷ್ಟು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿರಬೇಕೆಂದು ಕೂಡಾ ನಾನು ಬಯಸುತ್ತೇನೆ. ಆದರೆ ಅವರ ಹೊಸ ಮಿತ್ರ ಬಿಜೆಪಿ ಶಾಶ್ವತವಾಗಿ ವಿರೋಧ ಪಕ್ಷದಲ್ಲಿಯೇ ಇರಬೇಕೆಂದು ನಾನು ಬಯಸುತ್ತೇನೆ. ನಮ್ಮ ಕಾಂಗ್ರೆಸ್ ಪಕ್ಷ ಈ ಬಯಕೆ ಈಡೇರಿಕೆಗೆ ನಿರಂತರ ಪ್ರಯತ್ನ ಮಾಡಲಿದೆ" ಎಂದರು.
ʼಯಾವ ರಾಜಕೀಯ ಪಕ್ಷ ಕೂಡಾ ಮತ್ತೊಂದು ರಾಜಕೀಯ ಪಕ್ಷದ ಅಂತ್ಯವನ್ನು ಬಯಸಬಾರದು. "ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ" ಎಂಬ ಸೊಕ್ಕಿನ ಮಾತುಗಳನ್ನು ಆಡುತ್ತಿರುವ ಬಿಜೆಪಿಯ ಗಾಳಿ ಎಚ್.ಡಿ ದೇವೇಗೌಡ ಅವರಿಗೂ ಸೋಕಿದ ಹಾಗಿದೆ. ಅದಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇದು "ಸಂಘ" ದೋಷದ ಫಲ ಎಂದು ವ್ಯಂಗ್ಯವಾಡಿದರು.