ಕಾಂಗ್ರೆಸ್ ನುಡಿದಂತೆ ನಡೆದು ಮತ ಕೇಳುತ್ತದೆ; ಬಿಜೆಪಿ ದ್ವೇಷದ ಭಾವನೆ ಮೂಡಿಸಿ ಮತ ಕೇಳುತ್ತದೆ: ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು, ಆ. 30: ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಜನರ ಬಳಿ ಮತ ಕೇಳುತ್ತದೆ. ಬಿಜೆಪಿ ದ್ವೇಷದ ಭಾವನೆ ಮೂಡಿಸಿ ಮತ ಕೇಳುತ್ತದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಬುಧವಾರ ಚಾಮರಾಜಪೇಟೆ ಕಸ್ತೂರಿ ನಗರದ ಬಿಬಿಎಂಪಿ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ್ದು ಅಭಿವೃದ್ಧಿ ಮಂತ್ರ, ಬಿಜೆಪಿ ಅವರದು ದ್ವೇಷದ ತಂತ್ರ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷವು ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಪೈಕಿ ನಾಲ್ಕು ಈಡೇರಿಸಿದೆ. ಇಂದು ಗೃಹಲಕ್ಷ್ಮಿ 1.28ಕೋಟಿ ಮನೆ ಯಜಮಾನಿಯರ ಖಾತೆಗೆ ತಲಾ 2 ಸಾವಿರ ರೂ. ಜಮೆ ಆಗಿದೆ. ಇಷ್ಟು ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.
ರಾಹುಲ್ ಗಾಂಧಿ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಮ್ಮ ಸರಕಾರ ಮುನ್ನಡೆಯುತ್ತಿದೆ. ಗೃಹಜ್ಯೋತಿಯಡಿ 1.42 ಕೋಟಿ ಕುಟುಂಬಗಳಿಗೆ ಅನುಕೂಲ ಆಗಿದೆ. ‘ಶಕ್ತಿ’ ಯೋಜನೆ ಯಡಿ 48 ಕೋಟಿ ಮಹಿಳೆಯರು 1ಸಾವಿರ ಕೋಟಿ ರೂ.ಮೊತ್ತದಷ್ಟು ಉಚಿತ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ 1.20 ಕೋಟಿ ಕುಟುಂಬಕ್ಕೆ 5ಕೆಜಿ ಅಕ್ಕಿ ಮೊತ್ತ ಜಮೆ ಮಾಡಿದ್ದೇವೆ. ಮತ್ತೊಂದು ಗ್ಯಾರಂಟಿ ಶೀಘ್ರವೇ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರ ಎಂದರೆ ಬಡವರ ಪರ ಸರಕಾರ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬಡವರ ಪರ ಯೋಜನೆ ರೂಪಿಸಿ ಕೆಲಸ ಮಾಡಿದೆ. ಐದು ಗ್ಯಾರಂಟಿ ಯೋಜನೆ ಗಳಿಗೆ ವರ್ಷಕ್ಕೆ 60 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದ್ದೇವೆ. ಇದು ನಮ್ಮ ಬದ್ಧತೆ ಎಂದು ಹೇಳಿದರು. ಮುಖಂಡರಾದ ಅಲ್ತಾಫ್ ಖಾನ್, ಡಿ.ಸಿ.ರಮೇಶ್, ಸುಜಾತಾ ರಮೇಶ್, ವಿನಾಯಕ ಮತ್ತಿತರರು ಉಪಸ್ಥಿತರಿದ್ದರು.