ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ: ಮುಳುಗಿದ ಹೆಬ್ಬಾಳೆ ಸೇತುವೆ, ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತ

Update: 2023-07-23 13:39 GMT

ಚಿಕ್ಕಮಗಳೂರು, ಜು.23: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ರವಿವಾರವೂ ಮುಂದುವರಿದಿದ್ದು, ಭಾರೀ ಮಳೆ ಹಲವೆಡೆ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ. ಶನಿವಾರ ರಾತ್ರಿ ಹಾಗೂ ರವಿವಾರ ಇಡೀ ದಿನ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಕಳಸ ಸಮೀಪದಲ್ಲಿ ಹರಿಯುವ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಹೆಬ್ಬಾಳೆ ಸೇತುವೆ ಮುಳುಗಡೆಯಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿದೆ.

ಶೃಂಗೇರಿ ತಾಲೂಕಿನಾದ್ಯಂತ ಭಾರೀ ಮಳೆ ಪರಿಣಾಮ ತುಂಗಾ ನದಿಯ ನೆರೆ ನೀರು ಶೃಂಗೇರಿ ಪಟ್ಟಣದ ಗಾಂಧಿಮೈದಾನವನ್ನು ಆವರಿಸಿಕೊಂಡಿದೆ. ಇನ್ನು ಅಲ್ಲಲ್ಲಿ ಮರಗಳು ಉರುಳಿ ರಸ್ತೆ ಬಿದ್ದ ಪರಿಣಾಮ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ಭಾರೀ ತೊಂದರೆಯಾಗಿದೆ. ಮಲೆನಾಡಿನ ಪ್ರಮುಖ ನದಿಗಳು ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಹಿಸಿದೆ.

ಕಳೆದ ಕೆಲ ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಶನಿವಾರ ರಾತ್ರಿಯಿಂದ ರವಿವಾರ ಇಡೀ ದಿನ ಅಬ್ಬರಿಸಿದ ಪರಿಣಾಮ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನ ಹೇಮಾವತಿ, ಭದ್ರೆ ಹಾಗೂ ತುಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕಳಸ ತಾಲೂಕಿನಾದ್ಯಂತ ಶನಿವಾರ ಹಾಗೂ ರವಿವಾರ ಸುರಿದ ಮಳೆಯಿಂದಾಗಿ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಅಪಾಯದ ಮಟ್ಟದಲ್ಲಿ ನದಿ ಹರಿಯಲಾರಂಭಿಸಿದೆ.

ಜಿಲ್ಲೆಯ ಶೃಂಗೇರಿ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿಯೂ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಶೃಂಗೇರಿ ಪಟ್ಟಣದಲ್ಲಿ ತುಂಗಾ ನದಿಯ ನೆರೆ ನೀರು ಶರದಾಂಬೆ ದೇಗುಲದ ಮೆಟ್ಟಿಲುಗಳವರೆಗೂ ಬಂದಿದ್ದು, ಕಪ್ಪೆ ಶಂಕರ ಮಠ ಎಂಬ ಸಣ್ಣ ಗುಡಿ ನದಿ ನೀರಿನಲ್ಲಿ ಮುಳುಗಡೆಯಾಗಿದೆ. ಅಲ್ಲದೇ ಪಟ್ಟಣದ ಗಾಂಧಿ ಮೈದಾನಕ್ಕೂ ನೆರೆ ನೀರು ನುಗ್ಗಿದ್ದು, ಮೈದಾನದಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ. ಗಾಂಧಿ ಮೈದಾನದಲ್ಲಿದ್ದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ತುಂಗಾ ನದಿಗೆ ಹೊಂದಿಕೊಂಡಿರುವ ಪ್ಯಾರಲಲ್ ರಸ್ತೆಯೂ ನದಿಯ ನೆರೆ ನೀರಿನಲ್ಲಿ ಮುಳುಗಡೆಯಾಗಿದ್ದು, ವಾಹನ, ಜನ ಸಂಚಾರಕ್ಕೆ ತೊಂದರೆಯಾಗಿದೆ. ತಾಲೂಕಿನ ಕೆರೆಕಟ್ಟೆ, ನೆಮ್ಮಾರು ಭಾಗದಲ್ಲಿ ರವಿವಾರ ಸಂಜೆ ವೇಳೆ ಮಳೆ ಮತ್ತಷ್ಟು ಬಿರುಸುಗೊಂಡಿದ್ದು, ನೆಮ್ಮಾರು ಗ್ರಾಮದಲ್ಲಿ ತುಂಗಾ ನದಿ ನೀರು ಕಾರ್ಕಳ, ಮಂಗಳೂರು-ಶೃಂಗೇರಿ ಸಂಪರ್ಕದ ರಾಜ್ಯ ಹೆದ್ದಾರಿ ಮೇಲೆ ಹರಿಯುತ್ತಿರುವುದರಿಂದ ವಾಹನ ಸಂಚಾರ ಕಡಿತಗೊಂಡಿದೆ.

ಉಳಿದಂತೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯೊಂದಿಗೆ ಗಾಳಿಯೂ ಬೀಸುತ್ತಿದ್ದು, ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ. ಮಲೆನಾಡು ಭಾಗದ ಅಲ್ಲಲ್ಲಿ ವಿದ್ಯುತ್ ಕಡಿತಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದಲ್ಲಿ ಹಾದು ಹೋಗಿರುವ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173 ಮೇಲೆ ರವಿವಾರ ಬೆಳಗ್ಗೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಸುಮಾರು 1 ಗಂಟೆಗಳ ಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಈ ವೇಳೆ ಆಲ್ದೂರು-ಹಾಂದಿ, ಮೂಡಿಗೆರೆ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಾರೀ ಮಳೆ, ಗಾಳಿಯಿಂದಾಗಿ ಕೊಪ್ಪ ತಾಲೂಕಿನ ಕುಂಚೂರು ಗ್ರಾಮದಲ್ಲಿ ನಾಗೇಶ್ ಎಂಬವರ ಅಡಿಕೆ ತೋಟದಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದು ರೈತ ಬೆಳೆದಿದ್ದ ಸುಮಾರು 70 ಅಡಿಕೆ ಮರಗಳು ಮುರಿದು ಬಿದ್ದ ಪರಿಣಾಮ ಭಾರೀ ನಷ್ಟ ಸಂಭವಿಸಿದೆ.

ಚಿಕ್ಕಮಗಳೂರು ತಾಲೂಕಿನಾದ್ಯಂತ ರವಿವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಸಾಧಾರಣ ಮಳೆಯಾಗಿದ್ದು, ಸಂಜೆ ಹೊತ್ತು ಮಳೆ ಬಿರುಸು ಪಡೆದುಕೊಂಡಿತ್ತು. ಚಿಕ್ಕಮಗಳೂರು ನಗರದಲ್ಲಿ ಇಡೀ ದಿನ ಸಾಧಾರಣ ಮಳೆಯಾಗಿದ್ದು, ನಿರಂತರ ಮಳೆಗೆ ನಗರದಲ್ಲಿ ಜನಜೀವನವೂ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯ ಬಯಲು ಭಾಗದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕು ವ್ಯಾಪ್ತಿಯಲ್ಲಿ ರವಿವಾರ ಇಡೀ ದಿನ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ.

 

ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ರವಿವಾರ ಇಡೀ ದಿನ ಭಾರೀ ಮಳೆಯಾಗಿದ್ದು, ಪ್ರಮುಖ ನದಿಗಳಾದ ಹೇಮಾವತಿ, ಭದ್ರಾ, ತುಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ನದಿ ಪಾತ್ರದ ಗ್ರಾಮಗಳಲ್ಲಿ ಪ್ರಾಣ ಹಾನಿಯಂತಹ ಅವಘಡಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಹಿಸಿದೆ. ರಾತ್ರಿ ವೇಳೆ ಮಲೆನಾಡು ಭಾಗದಲ್ಲಿ ಮಳೆ ಮತ್ತಷ್ಟು ಬಿರುಸುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಮುಳುಗಿದ ಹೆಬ್ಬಾಳೆ ಸೇತುವೆ

ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಮುಳುಗು ಸೇತುವೆ ಎಂದೇ ಹೆಸರಾಗಿರುವ ಕಳಸ-ಹೊರನಾಡು ಯಾತ್ರಾ ಸ್ಥಳ ಸಂಪರ್ಕದ ಹೆಬ್ಬಾಳೆ ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ.

ಸೇತುವೆ ಮೇಲೆ 4 ಅಡಿ ನೀರು ಹರಿಯುತ್ತಿದ್ದು, ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸೇತುವೆ ಎರಡೂ ಬದಿಯಲ್ಲಿ ಪೊಲೀಸ್ ಇಲಾಖೆ ಬ್ಯಾರಿಕೇಡ್ ಅಡ್ಡವಿಟ್ಟು ಮುಂಜಾಗ್ರತಾ ಕ್ರಮವಹಿಸಿದೆ. ಧಾರ್ಮಿಕ ಕ್ಷೇತ್ರವಾಗಿರುವ ಹೊರನಾಡು ದೇವಾಲಯಕ್ಕೆ ದೂರದ ಊರುಗಳಿಂದ ವಾಹನಗಳಲ್ಲಿ ಬಂದಿದ್ದ ಪ್ರವಾಸಿಗರು ಸುಮಾರು 20ಕಿಮೀ ದೂರದ ಹಳುವಳ್ಳಿ ಮೂಲಕ ಪರ್ಯಾಯ ರಸ್ತೆಯಲ್ಲಿ ಹೊರನಾಡು ಸಂಪರ್ಕಿಸುವಂತಾಗಿದೆ. ಈ ರಸ್ತೆ ಅತ್ಯಂತ ಕಿರು ರಸ್ತೆಯಾಗಿದ್ದು, ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಈ ರಸ್ತೆಯಲ್ಲಿ ಹೋಗುತ್ತಿರುವುದರಿಂದ ಹಳುವಳ್ಳಿ ಸೇರಿದಂತೆ ರಸ್ತೆಯುದ್ದಕ್ಕೂ ಟ್ರಾಫಿಕ್ ಜಾಮ್ ಆಗುತ್ತಿದೆ. ಹೊರನಾಡು ಸಂಪರ್ಕಕ್ಕೆ ಪ್ರವಾಸಿಗರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕುದುರೆಮುಖ-ಕಳಸ ಸಂಪರ್ಕ ರಸ್ತೆಯಲ್ಲಿರುವ ಜಾಂಬಳೆ ಎಂಬಲ್ಲಿ ಭದ್ರಾ ನದಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News