ಭ್ರಷ್ಟಾಚಾರ, ಕಾನೂನು ಬಾಹಿರ ಸಭೆಯ ಆರೋಪ: ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಎಜಿಎಂನಲ್ಲಿ ಕೋಲಾಹಲ, ಗದ್ದಲ
ಬ್ರಹ್ಮಾವರ, ಸೆ.11: ಭಾರೀ ಭ್ರಷ್ಟಾಚಾರ ಆರೋಪದ ಸುಳಿಯಲ್ಲಿ ಸಿಲುಕಿ ರುವ ಕರಾವಳಿ ಕರ್ನಾಟಕದ ಏಕೈಕ ಸಹಕಾರಿ ಕಾರ್ಖಾನೆಯಾದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಇಂದು ಗೊಂದಲದ ಗೂಡಾಗಿದ್ದು, ಕೋಲಾಹಲ ಹಾಗೂ ಗದ್ದಲದ ನಡುವೆ ಸಭೆಯನ್ನು ಮುಂದೂಡಲಾಯಿತು.
ಬ್ರಹ್ಮಾವರ ಹೊಟೇಲ್ ಆಶ್ರಯದ ಚಂದಮ್ಮ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ 11:30ರ ಸುಮಾರಿಗೆ ಪ್ರಾರಂಭಗೊಂಡ ಸಭೆಯನ್ನು ಸದಸ್ಯರ ಆಕ್ರೋಶ, ಧಿಕ್ಕಾರಗಳ ನಡುವೆ, ಪ್ರಾರಂಭಗೊಂಡ ಅರ್ಧಗಂಟೆ ಯೊಳಗೆ ಮುಂದೂಡುತ್ತಿರುವುದಾಗಿ ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಘೋಷಿಸಿದರು.
ಈ ಘೋಷಣೆಗೂ ಒಪ್ಪದ ಸದಸ್ಯರು, ಈ ಬಗ್ಗೆ ನಿರ್ಣಯ ಕೈಗೊಂಡು ಅಧಿಕೃತವಾಗಿ ಪ್ರಕಟಿಸಬೇಕೆಂದು ಆಗ್ರಹಿಸಿದಾಗ ಕಾರ್ಖಾನೆಯ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಎಚ್.ಎನ್. ರಮೇಶ್ ಅಧಿಕೃತವಾದ ಹೇಳಿಕೆ ಪ್ರಕಟಿಸಿ ಮುಂದಿನ ದಿನಾಂಕವನ್ನು ಸೆ.25ರೊಳಗೆ ನಿಗದಿ ಪಡಿಸಿ ಎಲ್ಲಾ ಸದಸ್ಯರಿಗೂ ನೋಟೀಸು ತಲುಪಿಸುವುದಾಗಿ ಘೋಷಿಸಿದರು.
ಇದಕ್ಕೆ ಮುನ್ನ ವಿಧಾನಪರಿಷತ್‌ನ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅಧ್ಯಕ್ಷತೆಯ ಉಡುಪಿ ಜಿಲ್ಲಾ ರೈತ ಸಂಘವು ಅಲ್ಲೇ ಪಕ್ಕದ ಅಂಬಾ ಸಭಾಭವನದಲ್ಲಿ ರೈತರ ಸಭೆ ನಡೆಸಿದ್ದು, ಈಗಿನ ಆಡಳಿತ ಮಂಡಳಿ, ಇಲಾಖಾ ಅಧಿಕಾರಿ ಗಳೊಂದಿಗೆ ಸೇರಿ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆಸಿದ ವ್ಯಾಪಕ ಭ್ರಷ್ಟಾಚಾರದ ಎಳೆಎಳೆಯನ್ನು ಬಿಡಿಸಿಟ್ಟು, ಇಂದಿನ ಎಜಿಎಂನಲ್ಲಿ ಈ ಬಗ್ಗೆ ಆಡಳಿತ ಮಂಡಳಿಯನ್ನು ಪ್ರಶ್ನಿಸಿಬೇಕೆಂದು ನಿರ್ಣಯಿಸಿತ್ತು. ಇದರೊಂದಿಗೆ ಬಹುಸಂಖ್ಯಾತ ಸದಸ್ಯರನ್ನು ಎಜಿಎಂನಿಂದ ಹೊರಗಿಡುವ ಹುನ್ನಾರದ ಕುರಿತಂತೆ ಎಚ್ಚರಿಸಿತ್ತು.
ಸಕ್ಕರೆ ಕಾರ್ಖಾನೆಯ ಎಜಿಎಂ ಸಭೆ ಆರಂಭಗೊಳ್ಳುತಿದ್ದಂತೆ ಕಾರ್ಖಾನೆಯ ಮಾಜಿ ನಿರ್ದೇಶಕ ಹಾಗೂ ಹಾಲಿ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಕಾರ್ಖಾನೆಯ ಎಲ್ಲಾ ಸಕ್ರಿಯ ಸದಸ್ಯರಿಗೆ ಎಜಿಎಂನ ನೋಟೀಸನ್ನು ಉದ್ದೇಶ ಪೂರ್ವಕವಾಗಿ ನೀಡದೇ ಕಾನೂನುಬಾಹಿರವಾಗಿ ಇಂದಿನ ಸಭೆ ನಡೆಯುತ್ತಿದೆ. ಮತ್ತು ಸರ್ವಸದಸ್ಯರ ಸಭೆಗೆ ಬೇಕಾದ ಕೋರಂ ಇಲ್ಲದ ಕಾರಣ ಸಭೆಯನ್ನು ಮುಂದೂಡುವಂತೆ ಬಲವಾಗಿ ಆಗ್ರಹಿಸಿದರು.
ಅವರಿಗೆ ಸೇರಿದ ಬಹುಸಂಖ್ಯಾತ ರೈತರು ಬೆಂಬಲ ನೀಡಿ ಘೋಷಣೆಗಳನ್ನು ಕೂಗಿದರು. ಮತ್ತೊಬ್ಬ ಸದಸ್ಯ ಹರಿಪ್ರಸಾದ್ ಶೆಟ್ಟಿ, ರೈತರ ಸಕ್ಕರೆ ಕಾರ್ಖಾನೆಯ ಎಜಿಎಂನಲ್ಲಿ ಉಪಸ್ಥಿತರಿರುವ ಬೌನ್ಸರ್‌ಗಳ ಕುರಿತು ಬಲವಾಗಿ ಆಕ್ಷೇಪಿಸಿದಾಗ ಗದ್ದಲ ಜೋರಾಯಿತು. ಅವರನ್ನು ತಕ್ಷಣ ಇಲ್ಲಿಂದ ಹೊರ ಕಳುಹಿಸುವಂತೆ ಎಲ್ಲರೂ ಆಗ್ರಹಿಸಿದರು.
ಮಧ್ಯಪ್ರವೇಶಿಸಿ ಮಾತನಾಡಿದ ಕಾರ್ಖಾನೆಯ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ, ನನಗೆ ಜೀವ ಬೆದರಿಕೆ ಇರುವುದರಿಂದ ಅವರನ್ನು ನನ್ನ ರಕ್ಷಣೆಗಾಗಿ ವೈಯಕ್ತಿಕ ನೆಲೆಯಲ್ಲಿ ಕರೆದಿದ್ದೇನೆ. ಅವರಿಗೂ ಸಕ್ಕರೆ ಕಾರ್ಖಾನೆಗೂ ಸಂಬಂಧವಿಲ್ಲ ಎಂದು ಸಮಜಾಯಿಷಿ ನೀಡಿದರು. ಅಲ್ಲದೇ ಸಭೆಯಲ್ಲಿದ್ದ ಬೌನ್ಸರ್‌ಗಳನ್ನು ಹೊರಹೋಗುವಂತೆ ಸೂಚಿಸಿದರು. ಆದರೆ ಇದರಿಂದ ತೃಪ್ತರಾಗದ ಸದಸ್ಯರು ಜೋರಾದ ಧಿಕ್ಕಾರದ ಘೋಷಣೆ ಕೂಗಿ, ನಿಮ್ಮೊಬ್ಬರ ರಕ್ಷಣೆಗೆ 10 ಮಂದಿ ಬೌನ್ಸರ್‌ಗಳು ಬೇಕಾ ಎಂದು ಜೋರಾಗಿ ಪ್ರಶ್ನಿಸಿದರು.
ಅಷ್ಟರಲ್ಲಿ ಧಿಕ್ಕಾರದ ಕೂಗು ಮುಗಿಲು ಮುಟ್ಟುವಂತಿತ್ತು. ಭ್ರಷ್ಟ ಅಧ್ಯಕ್ಷರಿಗೆ, ಭ್ರಷ್ಟ ಡಿಆರ್‌ಗೆ, ಆಡಳಿತ ಮಂಡಳಿಗೆ ಧಿಕ್ಕಾರ ಕೇಳಿಬಂತು. ಗದ್ದಲ ಮಧ್ಯೆ ಸಭೆಯನ್ನು 15 ನಿಮಿಷ ಮುಂದೂಡಿದ್ದು, ಸದಸ್ಯರಲ್ಲದವರು ಸಭೆಯಿಂದ ಹೊರನಡೆಯಿರಿ. ಮತ್ತೆ ಸಭೆಯನ್ನು ಮುಂದುವರಿಸಲಾಗುವುದು ಎಂದು ಸುಪ್ರಸಾದ ಶೆಟ್ಟಿ ಪ್ರಕಟಿಸಿದಾಗ, ಸಭೆಯಲ್ಲಿದ್ದ ಅಷ್ಟೂ ಮಂದಿ ಅದನ್ನು ವಿರೋಧಿಸಿದರು.
ಈ ಸಭೆ ಕಾನೂನುಬದ್ಧವಾಗಿ ನಡೆಯುತ್ತಿಲ್ಲ. ಇದನ್ನು ಮುಂದೂಡಿ ಮತ್ತೊಂದು ದಿನ ಎಲ್ಲರಿಗೂ ನೋಟೀಸು ಕಳುಹಿಸಿ ಆಹ್ವಾನಿಸಿ ಸಭೆ ನಡೆಸಿ ಎಂದು ದೊಡ್ಡ ಧ್ವನಿಯಲ್ಲಿ ಸದಸ್ಯರು ಒತ್ತಾಯಿಸಿದರು.
ಸಭೆಯನ್ನು ನಿಯಂತ್ರಿಸಲು ವಿಫಲರಾದ ಬಳಿಕ ಸುಪ್ರಸಾದ್ ಶೆಟ್ಟಿ ಸಭೆಯನ್ನು ಮುಂದೂಡುವುದಾಗಿ ಘೋಷಿಸಿದರು. ಇದೇ ಸೆ.25ರೊಳಗೆ ಮತ್ತೆ ಸಭೆಯನ್ನು ನಡೆಸಬೇಕಿದೆ ಎಂದು ಡಿಆರ್ ರಮೇಶ್ ಸ್ಪಷ್ಟಪಡಿಸಿದರು.
ಸದಸ್ಯರಲ್ಲದವರಿಂದ ಗದ್ದಲ: ಸುಪ್ರಸಾದ್ ಶೆಟ್ಟಿ
ಇಂದಿನ ಎಜಿಎಂನ್ನು ಹಾಳುಗೆಡಹುವ ಪೂರ್ವನಿರ್ಧಾರದೊಂದಿಗೆ ಬಂದ ಕಾರ್ಖಾನೆಯ ಸದಸ್ಯರಲ್ಲದ ಕೆಲವರು ಸಭೆಯಲ್ಲಿ ಗೊಂದಲ ಸೃಷ್ಟಿಸಿ ಗದ್ದಲಕ್ಕೆ ಕಾರಣರಾಗಿದ್ದಾರೆ. ಕೋರಂ ಇಲ್ಲವೆಂದು ಕಾನೂನು ಪ್ರಶ್ನೆ ಎತ್ತಿದ್ದರಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಸಭೆ ಮುಂದೂಡಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಕಾರ್ಖನೆಯಲ್ಲಿ ಒಟ್ಟು 3133 ಮಂದಿ ಸದಸ್ಯರಿದ್ದಾರೆ. ಇವರೆಲ್ಲರಿಗೂ ಸಭೆಯ ನೋಟೀಸು ಕಳುಹಿಸಲಾಗಿದೆ. ರೈತಸಂಘದಿಂದ 278 ಮಂದಿ ಕಳೆದ ವರ್ಷ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 163 ಮಂದಿಗೆ ಸದಸ್ಯತ್ವ ನೀಡಲಾಗಿದೆ. ಸದಸ್ಯರಾಗಿ ಒಂದು ವರ್ಷವೂ ಆಗದ ಕಾರಣ ಇವರಿಗೆ ನೋಟೀಸು ಕಳುಹಿಸಿಲ್ಲ ಎಂದರು.
ಗುಜರಿ ವ್ಯವಹಾರದಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಈ ಬಗ್ಗೆ ಎಲ್ಲಾ ದಾಖಲೆಗಳಿವೆ. ನಮ್ಮ ಆಡಳಿತ ಮಂಡಳಿ ಸಕ್ಕರೆ ಕಾರ್ಖಾನೆಯನ್ನು ಸಾಲ ಮುಕ್ತ ಮಾಡಿದೆ. ಅಲ್ಲದೇ 130 ಕೋಟಿ ರೂ.ನಲ್ಲಿ ಮಿಥೆನಾಲ್ ಉತ್ಪನ್ನ ಯೋಜನೆ, 4ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಯೋಜನೆ, ಬೆಲ್ಲ ತಯಾರಿ ಯೋಜನೆಗಳ ಬಗ್ಗೆ ಡಿಪಿಆರ್ ಸಿದ್ಧಪಡಿಸಿದ್ದು, ಕಾರ್ಖಾನೆಯನ್ನು ಪುನರಾರಂಭಿಸಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಸುಪ್ರಸಾದ್ ತಿಳಿಸಿದರು.
"20 ವರ್ಷಗಳ ಹಿಂದೆ ಈ ಕಾರ್ಖಾನೆ ಮುಚ್ಚಲಾಗಿದೆ. ಎರಡು ವರ್ಷಗಳ ಹಿಂದೆ ಬಂದ ಆಡಳಿತ ಮಂಡಳಿ ಕಾರ್ಖಾನೆಯ ಗುಜರಿ ವ್ಯವಹಾರದಲ್ಲಿ 15ರಿಂದ 20 ಕೋಟಿ ರೂ.ಅವ್ಯವಹಾರ ನಡೆಸಿದೆ. ಕಾನೂನು ಬಾಹಿರವಾಗಿ ಎಜಿಎಂ ನಡೆಸಲು ಪ್ರಯತ್ನಿಸಲಾಗಿದೆ. ಸಹಕಾರಿ ಕ್ಷೇತ್ರ ನಾಚಿಕೆಯಿಂದ ತಲೆತಗ್ಗಿಸಬೇಕಾದ ಘಟನೆ. ರೈತರ ಪಾಲಿಗೆ ಕರಾಳ ದಿನ. ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ".
-ಹರಿಪ್ರಸಾದ್ ಶೆಟ್ಟಿ, ರೈತ ಸದಸ್ಯ.