ಕೋಟ್ಯಂತರ ರೂ. ಮೌಲ್ಯದ ಬೇನಾಮಿ ಆಸ್ತಿ: ತಹಶೀಲ್ದಾರ್ ಅಜಿತ್ ರೈ ವಿರುದ್ಧದ ಪ್ರಕರಣದ ತನಿಖೆಗೆ SIT ರಚನೆ

Update: 2023-07-01 04:53 GMT

ಬೆಂಗಳೂರು, ಜು.1: ಐನೂರು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬೇನಾಮಿ ಆಸ್ತಿಗಳನ್ನು ಹೊಂದಿರುವ ಆರೋಪದಡಿ ಬಂಧಿತ ಕೆ.ಆರ್.ಪುರ ತಾಲೂಕು ತಹಶೀಲ್ದಾರ್ ಅಜಿತ್ ಕುಮಾರ್ ರೈ ವಿರುದ್ಧದ ಪ್ರಕರಣಗಳ ತನಿಖೆಗೆ ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ ಎಂದು ತಿಳಿದುಬಂದಿದೆ.

ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಡಿವೈಎಸ್ಪಿ ಪ್ರಮೋದ್ ಕುಮಾರ್ ನೇತೃತ್ವದ ಎಸ್ ಐಟಿ ತಂಡದಲ್ಲಿ ಇಬ್ಬರು ಡಿವೈಎಸ್ಪಿ, ನಾಲ್ವರು ಇನ್ಸ್ಪೆಕ್ಟರ್ಗಳಿದ್ದಾರೆ.

ಒಬ್ಬ ವ್ಯಕ್ತಿಯ ಅಕ್ರಮ ಆಸ್ತಿ ಪ್ರಕರಣದ ತನಿಖೆಗೆ ಲೋಕಾಯುಕ್ತದಲ್ಲಿ ಇದೇ ಮೊದಲ ಬಾರಿಗೆ ಎಸ್ಐಟಿ ರಚಿಸಲಾಗಿದೆ.

ಕೋಟ್ಯಂತರ ರೂ. ಅಕ್ರಮ ಆಸ್ತಿಪಾಸ್ತಿ ಹೊಂದಿರುವ ಆರೋಪದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಬಂಧಿತ ಅಜಿತ್ ಕುಮಾರ್ ರೈ ಯನ್ನು 7 ದಿನಗಳ ಕಾಲ ಲೋಕಾಯುಕ್ತರ ವಶಕ್ಕೆ ನೀಡಿ ನಗರದ 78ನೆ ಸಿಸಿಎಚ್ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.

ಜೂನ್ 28ರಂದು ಅಜಿತ್ ರೈಗೆ ಸೇರಿದ ಮನೆ ಹಾಗೂ ಕಚೇರಿ ಸೇರಿದಂತೆ 10 ಕಡೆಗಳಲ್ಲಿ ದಾಳಿ ನಡೆಸಿ ರಾತ್ರಿಯವರೆಗೂ ಪರಿಶೀಲನೆ ಮುಂದುವರಿಸಿದ್ದ ಲೋಕಾಯುಕ್ತ ಪೊಲೀಸರು, ಗುರುವಾರ ಬೆಳಗ್ಗೆ ಅವರನ್ನು ವಶಕ್ಕೆ ಪಡೆದಿದ್ದರು.

ಇನ್ನೂ ಶೋಧ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿಲ್ಲ. ಲೋಕಾಯುಕ್ತ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜತೆಗೆ, ಜಪ್ತಿ ಮಾಡಿರುವ ಚರಾಸ್ತಿ ಹಾಗೂ ಸ್ಥಿರಾಸ್ತಿಗಳ ಮೌಲ್ಯಮಾಪನ ನಡೆಸುತ್ತಿದ್ದಾರೆ.

ಅಷ್ಟೇ ಅಲ್ಲದೆ, ತಂದೆಯ ಮರಣದ ಬಳಿಕ ಕಂದಾಯ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಎಫ್ಡಿಎ ಹುದ್ದೆ ಪಡೆದುಕೊಂಡಿದ್ದ ಅಜಿತ್ ಹಂತ ಹಂತವಾಗಿ ತಹಶೀಲ್ದಾರ್ ಹುದ್ದೆಗೇರಿದ್ದರು. ವೃತ್ತಿ ಜೀವನದ ಬಹುತೇಕ ಅವಧಿಯನ್ನು ದೊಡ್ಡಬಳ್ಳಾಪುರ, ದೇವನಹಳ್ಳಿ ಸುತ್ತಮುತ್ತಲ ಭಾಗಗಳಲ್ಲಿ ಕಳೆದಿದ್ದಾರೆ. ಅದೇ ಭಾಗದಲ್ಲಿ ಸುಮಾರು 150 ಎಕರೆಗಿಂತ ಜಾಸ್ತಿ ಜಮೀನನ್ನು ಬೇನಾಮಿಗಳ ಹೆಸರುಗಳಲ್ಲಿ ಹೊಂದಿದ್ದಾರೆ. ಈವರೆಗೆ ಅವರ ನಿವಾಸಗಳಲ್ಲಿ 200 ಎಕರೆ ಜಮೀನಿಗೆ ಸಂಬಂಧಿಸಿದ 150 ರಿಂದ 160 ಕ್ರಯಪತ್ರಗಳು ದೊರೆತಿವೆ. ಈ ಜಮೀನುಗಳ ಮೌಲ್ಯವು ಸುಮಾರು 100 ಕೋಟಿ ರೂ. ದಾಟಬಹುದು. ಬಹುತೇಕ ಆಸ್ತಿ ಅಜಿತ್ ಆಪ್ತ ಗೌರವ್ ಶೆಟ್ಟಿ ಹೆಸರಿನಲ್ಲಿದೆ ಎಂದು ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News