ಯತ್ನಾಳ್ ವಿರುದ್ಧ ದೂರು ನೀಡಲು ನಾನು ರಾಜ್ಯಾಧ್ಯಕ್ಷನಾಗಿಲ್ಲ: ಬಿ.ವೈ. ವಿಜಯೇಂದ್ರ
ಬೆಂಗಳೂರು: ‘ಕೇಂದ್ರದ ಮಾಜಿ ಸಚಿವ, ವಿಜಯಪುರ ಕ್ಷೇತ್ರದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು ನೀಡಲು ನಾನು ರಾಜ್ಯಾಧ್ಯಕ್ಷನಾಗಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮಂಗಳವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ನನ್ನನ್ನು ಯತ್ನಾಳ್ ಅಥವಾ ಇನ್ಯಾರದೋ ವಿರುದ್ಧ ದಿಲ್ಲಿಯಲ್ಲಿ ದೂರು ಕೊಡಲು ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ. ಸಂಘಟನೆ ಬಲಪಡಿಸಲು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ ಎಂದು ನುಡಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರ ಕುರಿತು ವರಿಷ್ಠರೊಂದಿಗೆ ನಾನು ಯಾವುದೇ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಬಿಜೆಪಿ ಪಕ್ಷದ ಬೆಳವಣಿಗೆಗೆ ಪೂರಕ ಇದ್ದರೆ, ರಾಷ್ಟ್ರೀಯ ನಾಯಕರ ಒಪ್ಪಿಗೆ ಇದ್ದರೆ ಯತ್ನಾಳ್ ಸೇರಿದಂತೆ ಇನ್ನಿತರರು ಇನ್ನೊಂದು ಪಾದಯಾತ್ರೆ ಮಾಡಬಹುದು’ ಎಂದು ಅವರು ಸ್ಪಷ್ಟಣೆ ನೀಡಿದರು.
ಸಿಎಂ ರಾಜೀನಾಮೆ ನೀಡುವುದು ಒಳಿತು: ಎರಡು ತಿಂಗಳುಗಳಿಂದ ರಾಜ್ಯದ ಆಡಳಿತ ಸಂಪೂರ್ಣ ಕುಸಿದಿದೆ. ಸಿದ್ದರಾಮಯ್ಯ ಯಾವುದೇ ಕ್ಷಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು. ಸಚಿವರಿಗೆ ವಿಶ್ವಾಸ ಇಲ್ಲ. ಹೀಗಾಗಿ ವಿಧಾನಸೌಧಕ್ಕೂ ಸಚಿವರು ಹೋಗುತ್ತಿಲ್ಲ. ಯಾವಾಗ ಸಿಎಂ ರಾಜೀನಾಮೆ ಕೊಡುತ್ತಾರೋ, ಯಾವಾಗ ಸಿದ್ದರಾಮಯ್ಯರ ಪರವಾಗಿ ಬ್ಯಾಟಿಂಗ್ ಮಾಡಲು ದಿಲ್ಲಿಗೆ ಹೋಗಬೇಕೋ ಎಂಬ ಆತಂಕ ಅವರಲ್ಲಿದೆ ಎಂದು ಎಂದು ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೈಷ್ಣೋದೇವಿಗೆ ಹೋಗಿ ಬಂದಿದ್ದಾರೆ. ತಾಯಿಯಲ್ಲಿ ಆಶೀರ್ವಾದ ಪಡೆದುಕೊಂಡು ಬಂದಂತಿದೆ, ಅದು ಬೇರೆ ವಿಚಾರ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯರ ಆಡಳಿತದ ಕ್ಷಣಗಣನೆ ಆರಂಭವಾಗಿದೆ. ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು ಎಂದು ಅವರು ನುಡಿದರು.
ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಸಾವಿರಾರು ಜನರು ಉತ್ಸಾಹದಿಂದ ಭಾಗವಹಿಸಿದ್ದರು. ಪಾಪ, ಕಾಂಗ್ರೆಸ್ಸಿಗರು ಗಾಬರಿಯಿಂದ ನಮ್ಮ ಪಾದಯಾತ್ರೆ ತಲುಪುವ ಮುನ್ನ ಜನಾಂದೋಲನ ಮಾಡಿದ್ದರು. ಮತ್ತೊಂದೆಡೆ ಸ್ವತಃ ಸಿದ್ದರಾಮಯ್ಯ ಮೈಸೂರಿನಲ್ಲಿದ್ದು, ಜನಾಂದೋಲನಕ್ಕೆ ಸಿದ್ಧತೆ ಮಾಡಿದ್ದರು. ಮುಖ್ಯಮಂತ್ರಿ ಜನರ ವಿಶ್ವಾಸ ಕಳಕೊಂಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿ ಪಾದಯಾತ್ರೆಯ ಯಶಸ್ಸಿನ ವಿಷಯದಲ್ಲಿ ಮಾಹಿತಿ ಹಂಚಿಕೊಂಡಿದ್ದೇನೆ. ಕರ್ನಾಟಕದಲ್ಲಿ ಬಿಜೆಪಿ ಕಳೆದ ಬಾರಿ 1.05 ಕೋಟಿ ಸದಸ್ಯತ್ವ ನೋಂದಣಿ ಮಾಡಿಸಿದ್ದೆವು. ಈ ಬಾರಿ ಇನ್ನೂ ಹೆಚ್ಚು ಸದಸ್ಯತ್ವ ದಾಖಲಿಸುವ ಕುರಿತು ಸಮಾಲೋಚನೆ ನಡೆಸಿದ್ದೇನೆ ಎಂದರು.