ಕೋವಿಡ್ ಅಕ್ರಮ | ನ್ಯಾ.ಕುನ್ಹಾ ವರದಿ ಅಧ್ಯಯನಕ್ಕೆ ಹಿರಿಯ ಅಧಿಕಾರಿಗಳಿಗೆ ಹೊಣೆ : ಎಚ್.ಕೆ.ಪಾಟೀಲ್

Update: 2024-09-05 16:04 GMT

ಎಚ್.ಕೆ.ಪಾಟೀಲ್

ಬೆಂಗಳೂರು: ಕೋವಿಡ್ ವಿಚಾರದಲ್ಲಿ ನ್ಯಾ.ಕುನ್ಹಾ ಮುಖ್ಯಮಂತ್ರಿಗೆ ಸಲ್ಲಿಸಿರುವ ವರದಿ ವಿವರವಾಗಿ ಅಧ್ಯಯನ ನಡೆಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ನೂರಾರು ಕೋಟಿ ರೂ.ಅವ್ಯವಹಾರ ಆಗಿರುವ ಬಗ್ಗೆ ನ್ಯಾಯಮೂರ್ತಿ ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಹಲವಾರು ಕಡತಗಳು ನಾಪತ್ತೆಯಾಗಿರುವ ಬಗ್ಗೆಯೂ ಗಮನ ಸೆಳೆದಿದ್ದಾರೆ ಎಂದು ಹೇಳಿದರು.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿ, ವಿವರಗಳನ್ನು ತನಿಖೆ ವೇಳೆ ಗಮನಿಸಲಾಗಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯಲ್ಲಿ ಮುಖ್ಯಮಂತ್ರಿಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಇರಲಿದ್ದಾರೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷನಾಗಿ ನಾನೇ ಸರಕಾರಕ್ಕೆ ವರದಿ ನೀಡಿದ್ದೇನೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಕುನ್ಹಾ ವರದಿಯಲ್ಲಿ ಏನೆಲ್ಲ ಅಂಶಗಳು ಇವೆ ಅನ್ನೋದು ನನಗೆ ಗೊತ್ತಿಲ್ಲ. ಮುಖ್ಯಮಂತ್ರಿಗೆ ಅವರು ವರದಿ ಸಲ್ಲಿಕೆ ಮಾಡಿದ್ದಾರೆ. ಈಗ ಅಧಿಕಾರಿಗಳ ಸಮಿತಿಗೆ ಅದನ್ನು ವಹಿಸಲಾಗಿದೆ. ಅವರು ವರದಿ ಕೊಟ್ಟ ನಂತರ ಎಲ್ಲ ವಿವರಗಳನ್ನು ನಿಮ್ಮ ಮುಂದೆ ಇಡುತ್ತೇವೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News