ಕೋವಿಡ್‌ ಹಗರಣ | ಬಿ.ಎಸ್‌.ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸು

Update: 2024-11-09 12:29 GMT

ಬಿ.ಎಸ್.​ಯಡಿಯೂರಪ್ಪ/ಬಿ.ಶ್ರೀರಾಮುಲು

ಬೆಂಗಳೂರ : ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭ ಕೋವಿಡ್-19 ಸೋಂಕಿನ ಚಿಕಿತ್ಸೆಯ ಹೆಸರಿನಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದ ಆಯೋಗವು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ವಿರುದ್ಧ ತನಿಖೆಗೆ ಶಿಫಾರಸ್ಸು ಮಾಡಿದೆ.

2020ರ ಎಪ್ರಿಲ್‍ನಲ್ಲಿ ಚೀನಾ ಮೂಲದ ಎರಡು ಕಂಪೆನಿಗಳಿಂದ 3 ಲಕ್ಷ ಪಿಪಿಇ ಕಿಟ್‍ಗಳನ್ನು ಅತ್ಯಂತ ದುಬಾರಿ ದರಗಳಲ್ಲಿ ಖರೀದಿಸಿದ್ದಕ್ಕೆ ಯಾವುದೇ ನಿಖರವಾದ ಕಾರಣವಿಲ್ಲ. ಅಲ್ಲದೆ, 1988ರ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ವಿಶ್ವಾಸಾರ್ಹತೆ ಉಲ್ಲಂಘನೆ ಅಪರಾಧದ ಅನ್ವಯ ಸೆಕ್ಷನ್ 7 ಮತ್ತು 11ರ ಅಡಿ ತನಿಖೆ ನಡೆಸುವಂತೆ ಆಯೋಗವು ಶಿಫಾರಸು ಮಾಡಿದೆ. ಅಂದಿನ ಸಿಎಂ ಮತ್ತು ಆರೋಗ್ಯ ಸಚಿವರು ಸೇರಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಯೋಗವು ಸಲಹೆ ನೀಡಿದೆ.

2024ರ ಆಗಸ್ಟ್ 31ರಂದು ಮೈಕಲ್ ಡಿ.ಕುನ್ಹಾ ಆಯೋಗವು ತನ್ನ ಮಧ್ಯಂತರ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು. ಈ ಸಂಬಂಧ ಸಚಿವ ಸಂಪುಟದ ಉಪ ಸಮಿತಿಯು ವರದಿ ಪರಿಶೀಲಿಸುತ್ತಿದ್ದು, ಉಪ ಸಮಿತಿ ಆಯೋಗದ ಶಿಫಾರಸ್ಸನ್ನು ಆಧರಿಸಿ ಯಡಿಯೂರಪ್ಪ ಮತ್ತು ಬಿ.ಶ್ರೀರಾಮುಲು ವಿರುದ್ಧ ತನಿಖೆಗೆ ಸೂಚಿಸಿದೆ.

ಚೀನಾದಿಂದ ಪಿಪಿಇ ಕಿಟ್: ಚೀನಾ ಮೂಲದ ಡಿಎಚ್‍ಬಿ ಗ್ಲೋಬಲ್ ಹಾಂಗ್ ಕಾಂಗ್ ಮತ್ತು ಬಿಗ್ ಫಾರ್ಮಾಸ್ಯೂಟಿಕಲ್ಸ್‌ ನಿಂದ ಪ್ರತಿ ಯನಿಟ್‍ಗೆ 2ಸಾವಿರ ರೂ.ನಂತೆ 3 ಲಕ್ಷ ಪಿಪಿಇ ಕಿಟ್‍ಗಳನ್ನು ಖರೀದಿಸಲಾಗಿದೆ. ಈ ಖರೀದಿ ಪ್ರಕ್ರಿಯೆಯು ಯಾವುದೇ ಟೆಂಡರ್ ಕರೆಯದೆ ಅಥವಾ 1999ರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯ ವಿನಾಯಿತಿ ಪಡೆಯದೆ ನೇರವಾಗಿ ನಡೆದಿದೆ ಎನ್ನಲಾಗಿದೆ.

‘ಸಂಗ್ರಹಣೆ ನಿಯಮದ ಮೂಲ ಕಾರ್ಯವಿಧಾನವನ್ನು ಅನುಸರಿಸದೆ ನೇರವಾಗಿ ಅಂದಿನ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಆದೇಶದಂತೆ ಪಿಪಿಇ ಕಿಟ್‍ಗಳ ಸಂಗ್ರಹಣೆ ಮಾಡಲಾಗಿದೆ’ ಎಂದು ವರದಿ ಹೇಳಿದೆ. ‘ಪಿಪಿಇ ಕಿಟ್ ಖರೀದಿಯ ಇಡೀ ಪ್ರಕ್ರಿಯೆಯು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಆಪ್ತ ಪೂರೈಕೆದಾರರಿಗೆ ಅನುಕೂಲ ಮತ್ತು ಲಾಭ ಮಾಡಿಕೊಡುವ ರೀತಿಯಲ್ಲಿ ನಡೆದಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News