ಕೋವಿಡ್ ಭೀತಿ| ಶಾಲಾ ಮಕ್ಕಳಿಗೆ ಪ್ರತ್ಯೇಕ ಮಾರ್ಗಸೂಚಿ: ಸಚಿವ ಮಧು ಬಂಗಾರಪ್ಪ
Update: 2023-12-21 13:51 GMT
ಬೆಂಗಳೂರು: ‘ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಸಲಹೆ ಮೇರೆಗೆ ಶಾಲಾ ಮಕ್ಕಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆರೋಗ್ಯ ಇಲಾಖೆ ಮಾರ್ಗಸೂಚಿ ಪರಿಗಣಿಸುತ್ತೇವೆ. ಶಾಲಾ ವಿದ್ಯಾರ್ಥಿಗಳಿಗೆ ಏನೆಲ್ಲಾ ಕ್ರಮ ವಹಿಸಬೇಕೆಂದೂ ನಿರ್ಧಾರ ಮಾಡುತ್ತಿದ್ದೇವೆ. ಇನ್ನೊಂದೆಡೆ, ಈಗಾಗಲೇ ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಆಗಿದ್ದು, ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡಲು ಹೇಳಿದ್ದಾರೆ ಎಂದರು.
ಶಾಲಾ ಪಠ್ಯ ಪರಿಸ್ಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಕುರಿತ ಪಠ್ಯಕ್ಕೆ ಸಂಬಂಧಿಸಿದಂತೆ ತಜ್ಞರು ಯಾವ ಅಂಶ ಉಲ್ಲೇಖಿಸುತ್ತಾರೋ ನೋಡಬೇಕು. ಆದರೆ, ಪಠ್ಯ ತಿರುಚಿವ ಪ್ರಯತ್ನ ಮಾಡುವುದಿಲ್ಲ ಎಂದು ನುಡಿದರು.