ಮಣಿಪುರದ ಸಿಎಂ ರಾಜೀನಾಮೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‍ನಲ್ಲಿ ಸಿಪಿಐ ಧರಣಿ

Update: 2023-07-25 17:56 GMT

ಬೆಂಗಳೂರು, ಜು.25: ಗಲಭೆಗಳನ್ನು ನಿಯಂತ್ರಿಸಲು ವಿಫಲವಾದ ಮಣಿಪುರದ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು. ಅಲ್ಲಿನ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಆಗ್ರಹಿಸಿದೆ.

ಮಂಗಳವಾರ ನಗರದ ಧರಣಿ ನಡೆಸಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಮಣಿಪುರದ ವಸ್ತುಸ್ಥಿತಿಯ ವರದಿಯನ್ನು ಮಾಧ್ಯಮಗಳಿಗೆ ನೀಡಿದ ಎನ್‍ಎಫ್‍ಐಡಬ್ಲ್ಯು ನಾಯಕಿಯರ ಮೇಲೆ ಮಣಿಪುರ ಸರಕಾರ ದಾಖಲಿಸಿರುವ ಎಫ್‍ಐಆರ್ ಅನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರವು ಮಣಿಪುರದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಜನರಿಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಬೇಕು. ಅಕ್ರಮವಾಗಿ ಅರಣ್ಯದಲ್ಲಿ ಬೆಳೆಯುತ್ತಿರುವ ಗಸಗಸೆ (ಮಾದಕ ವಸ್ತು) ಕೃಷಿಯನ್ನು ತಡೆಯಬೇಕು. ಅಕ್ರಮ ವಲಸೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮಣಿಪುರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿ ಜನತೆಗೆ ಅಗತ್ಯ ಆಹಾರವಸ್ತು ಮತ್ತು ಔಷಧ ಸರಬರಾಜು ಮಾಡಬೇಕು ಎಂದು ಸಾತಿ ಸುಂದರೇಶ್ ತಿಳಿಸಿದರು.

ರಾಜ್ಯ ಸಹ ಕಾರ್ಯದರ್ಶಿ ಅಮ್ಜದ್ ಮಾತನಾಡಿ, ಅಕ್ರಮ ವಲಸೆ, ಮಾದಕ ವಸ್ತುಗಳ ದಂಧೆ, ಭೂ ಮಾಫಿಯಾ, ಭಯೋತ್ಪಾದಕ ಸಂಘಟನೆಗಳ ಹಸ್ತಕ್ಷೇಪ ಹಾಗೂ ಇದಕ್ಕೆ ಬೆಂಬಲವಾಗಿ ನಿಂತಿರುವ ರಾಜ್ಯ ಮತ್ತು ಕೇಂದ್ರ ಸರಕಾರಗಳು ಇಂದು ಮಣಿಪುರದಲ್ಲಿ ಗಲಭೆಗಳಿಗೆ ಪ್ರಮುಖ ಕಾರಣವಾಗಿವೆ ಎಂದು ಆರೋಪಿಸಿದರು.

ಮಣಿಪುರದಲ್ಲಿ ಭೀಕರ ದುರಂತ ಸಂಭವಿಸಿದರೂ ಯಾವುದೇ ಕ್ರಮ ಜರುಗಿಸದೆ ಪ್ರಧಾನ ಮಂತ್ರಿ ಮೌನವಾಗಿದ್ದಾರೆ. ತಮ್ಮದೇ ಪಕ್ಷದ ಮೈತ್ರಿ ಸರಕಾರ ಮಣಿಪುರದಲ್ಲಿ ಆಡಳಿತ ನಡೆಸುತ್ತಿದ್ದು, ಗಲಭೆಯನ್ನು ತಡೆಯುವಲ್ಲಿ ವಿಫಲವಾಗಿದೆ. ಇದು ಸರಕಾರಿ ಪ್ರಾಯೋಜಿತ ಹಿಂಸಾಚಾರದಂತೆ ಕಾಣುತ್ತಿದೆ ಎಂದು ಅಮ್ಜದ್ ತಿಳಿಸಿದರು. ಧರಣಿಯಲ್ಲಿ ಕಾರ್ಯದರ್ಶಿ ಎಂ.ಸತ್ಯಾನಂದ್ ಸೇರಿ ಹಲವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News