ರಾಜ್ಯದಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಿದರೆ ಕ್ರಿಮಿನಲ್ ಪ್ರಕರಣ: ಸಚಿವ ಸಂಪುಟ ತೀರ್ಮಾನ

Update: 2024-02-15 23:17 IST
ರಾಜ್ಯದಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಿದರೆ ಕ್ರಿಮಿನಲ್ ಪ್ರಕರಣ: ಸಚಿವ ಸಂಪುಟ ತೀರ್ಮಾನ

File Photo

  • whatsapp icon

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತವಾಗಿ ಬಡಾವಣೆಗಳನ್ನು ನಿರ್ಮಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮತ್ತು ಅದಕ್ಕೆ ಅವಕಾಶ ನೀಡುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಶಿಸ್ತುಕ್ರಮ ಹಾಗೂ ದಂಡ ವಿಧಿಸಲೂ ಸಂಪುಟ ಉಪ ಸಮಿತಿ ಮಾಡಿದ್ದ ಶಿಫಾರಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲ ಅನಧಿಕೃತ ಮಾರಾಟವನ್ನು ನಿಯಂತ್ರಿಸಲು ಇ-ಆಸ್ತಿಯಡಿ ಹೊರತುಪಡಿಸಿ ಯಾವುದೇ ಮಾದರಿಯಲ್ಲಿ ನೋಂದಣಿಗೆ ಅವಕಾಶ ಇಲ್ಲದಂತೆ ಮಾಡಲಾಗಿದೆ. ಅನುಮತಿ ಇಲ್ಲದೆ ಕಂದಾಯ ಭೂಮಿಯಲ್ಲಿ ಬಡಾವಣೆ ನಿರ್ಮಿಸಿದರೆ ನಿವೇಶನ ಮಾರಾಟಕ್ಕೆ ಅವಕಾಶವೇ ಇರುವುದಿಲ್ಲ. ಕಾವೇರಿ ತಂತ್ರಾಂಶದಲ್ಲೇ ಇದಕ್ಕೆ ಕಡಿವಾಣ ಹಾಕಲಾಗಿದೆ. ಇಂತಹ ಬಡಾವಣೆಯ ಪಹಣಿಯಲ್ಲೇ ಅನಧಿಕೃತ ಬಡಾವಣೆ ಎಂದು ನಮೂದಾಗುವ ಕಾರಣ ಖಾತೆ ಇಲ್ಲದ ಯಾವುದೇ ಸ್ವತ್ತಿನ ನೋಂದಣಿಯೇ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಸರಕಾರ ನಿರ್ಧರಿಸಿದೆ.

ರಾಜ್ಯದ ಎಲ್ಲ ನಗರ, ಪಟ್ಟಣಗಳಲ್ಲಿ ಕಂದಾಯ ಭೂಮಿಯಲ್ಲಿ ಅನಧಿಕೃತ ಬಡಾವಣೆ ಮತ್ತು ನಕ್ಷೆ ಮಂಜೂರಾತಿ ಇಲ್ಲದೆ ಕಂದಾಯ ಭೂಮಿಯಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ಬಿ-ಖಾತೆ ನೀಡಿ ಕಟ್ಟಡ ತೆರಿಗೆ ವಿಧಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಬಿಬಿಎಂಪಿ ಕಾಯ್ದೆ 2020ರ ಕಲಂ 144(6) ಮತ್ತು (21)ರ ಅಂಶಗಳನ್ನು ರಾಜ್ಯದ ಇತರ ಮಹಾನಗರ ಪಾಲಿಕೆಗಳಿಗೆ/ನಗರ ಸ್ಥಳೀಯ ಸಂಸ್ಥೆಗಳಿಗೆ ಸಹ ವಿಸ್ತರಣೆ ಮಾಡುವ ಸಂಬಂಧ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ-1976 ಹಾಗೂ ಕರ್ನಾಟಕ ಪುರಸಭೆ ಕಾಯ್ದೆ-1964ರಲ್ಲಿ ಅಳವಡಿಸಿಕೊಳ್ಳುವ ಕುರಿತ ಸಾಧಕ-ಬಾಧಕ ಪರಿಶೀಲಿಸಲು ಸೂಕ್ತ ತೀರ್ಮಾನ ಕೈಗೊಳ್ಳುವ ಸಲುವಾಗಿ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಂಪುಟ ಉಪ ಸಮಿತಿ ಶಿಫಾರಸಿಗೆ ಸಂಪುಟ ಸಭೆ ಅಂಗೀಕಾರ ನೀಡಿದೆ.

ರಾಜ್ಯದಲ್ಲಿ ಸದ್ಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ ಸುಮಾರು 34.35ಲಕ್ಷಕ್ಕೂ ಹೆಚ್ಚು ಅನಧಿಕೃತ ಆಸ್ತಿಗಳಾಗಿವೆ ಎಂದು ಅಂದಾಜಿಸಲಾಗಿದೆ.

ಈ ಆಸ್ತಿಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಸೇರಿದಂತೆ ಮೂಲಸೌಕರ್ಯವನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಕಲ್ಪಿಸಲಾಗುತ್ತಿದ್ದರೂ ತೆರಿಗೆ ವಿಧಿಸಲು ಅವಕಾಶ ಇರಲಿಲ್ಲ. ಕಟ್ಟಡ ತೆರಿಗೆ ವಿಧಿಸುವುದರಿಂದ ಸರಕಾರಕ್ಕೂ ಆದಾಯ ಬರಲಿದೆ. ಅನಧಿಕೃತ ಬಡಾವಣೆಗಳ ಮತ್ತು ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿದ ಮಧ್ಯಮ ಮತ್ತು ಬಡ ವರ್ಗದವರಿಗೆ ಹೊರೆ ಆಗದ ರೀತಿಯಲ್ಲಿ ಮನೆ ಕಂದಾಯ ನಿಗದಿ ಮಾಡಲು ತೀರ್ಮಾನಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News