ಮಾಸಾಂತ್ಯದೊಳಗೆ ಬೆಳೆ ವಿಮೆ ಪಾವತಿ: ಸಚಿವ ಚಲುವರಾಯಸ್ವಾಮಿ
ಬೆಳಗಾವಿ ಡಿ.13: ರೈತರ ಹಿತ ಸಂರಕ್ಷಣೆ ರಾಜ್ಯ ಸರಕಾರದ ಮೊದಲ ಆದ್ಯತೆಯಾಗಿದೆ. ಈಗಾಗಲೇ ರಾಜ್ಯದಲ್ಲಿ ತೀವ್ರ ಬರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಈ ಮಾಸಾಂತ್ಯದೊಳಗೆ ಬೆಳೆ ವಿಮೆ ಹಣ ಪಾವತಿಯಾಗಲಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನ ಸಭೆಯಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗಾರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸದ ಸಚಿವರು, ಈ ವರ್ಷ ತೀವ್ರ ಬರ ಕಾಡಿದೆ. ಪ್ರಿವೆಂಟೀವ್ ಸೋಯಿಂಗ್ ಇನ್ವೋಕ್ ಹಾಗೂ ಮಿಡ್ ಸೀಜನ್ ಅಡ್ವರ್ಸಿಟಿಯಡಿ ಅಂದಾಜಿಸಲಾದ ಪರಿಹಾರ ಸುಮಾರು 450 ಕೋಟಿ ರೂಪಾಯಿ ಭರಿಸಲಾಗಿದೆ. ಈಗಾಗಲೇ ಬೆಳೆ ಕಟಾವ್ ಸಮೀಕ್ಷೆ ಸಂಪೂರ್ಣ ಮುಗಿದಿದ್ದು, ಉಳಿದ ರೈತರಿಗೂ ವಿಮೆ ಹಣ ಶೀಘ್ರ ತಲುಪಲಿದೆ ಎಂದು ಮಾಹಿತಿ ನೀಡಿದರು.
ಬೆಳೆ ಕಟಾವ್ ಸಮೀಕ್ಷೆಯಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ಹಿಂದಿನ ಏಳು ಸಾಲುಗಳಲ್ಲಿ ಐದು ವರ್ಷಗಳ ಸರಾಸರಿ ಇಳುವರಿಯನ್ನು ಮಾನದಂಡವನ್ನಾಗಿ ಪರಿಗಣಿಸಲಾಗುತ್ತಿದೆ. ಇದನ್ನು ಬದಲಾಯಿಸುವಂತೆ ರಾಜ್ಯ ಸರಕಾರದಿಂದ ಪತ್ರದ ಮೂಲಕ ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಈ ಮಾರ್ಗಸೂಚಿಯನ್ನು ಬದಲಾಯಿಸಲು ಕೇಂದ್ರ ಸರಕಾರ ಸಮ್ಮತಿಸಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಸದನಕ್ಕೆ ಮಾಹಿತಿ ನೀಡಿದರು.
ಆದರೂ ರಾಜ್ಯದ ರೈತರ ಹಿತವನ್ನು ಕಾಯ್ದುಕೊಂಡು, ಯಾವುದೇ ತೊಂದರೆಯಾಗದಂತೆ ವಿಶೇಷ ಗಮನಹರಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರು ಈ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಕೃಷಿ ಸಚಿವರು ಹೇಳಿದರು.
ಕೃಷಿ ಭಾಗ್ಯ ಯೋಜನೆ ಚಾಲನೆ: ವಿಧಾನ ಸಭೆಯಲ್ಲಿ ಶ್ರವಣಬೆಳಗೋಳ ಕ್ಷೇತ್ರದ ಶಾಸಕ ಸಿ.ಎಂ. ಬಾಲಕೃಷ್ಣ ಮನವಿಗೆ ಸ್ಪಂದಿಸಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೃಷಿ ಭಾಗ್ಯ ಯೋಜನೆಗೆ ಮರು ಚಾಲನೆ ನೀಡಲಾಗಿದೆ. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಪಡೆದು ಮಾರ್ಗಸೂಚಿ ಹೊರಡಿಸಲಾಗಿದೆ. ಶೀಘ್ರ ಅನುಷ್ಠಾನ ಗೊಳಿಸಲಾಗುವುದು ಎಂದರು.