ಬೆಳೆ ಸಾಲ ಮನ್ನಾ ಬೆಳಗಾವಿ ಅಧಿವೇಶನದ ಮೊದಲ ನಿಲುವಳಿ: ಆರ್ ಅಶೋಕ್
ಕಲಬುರಗಿ: 'ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಬರದಿಂದ ಬೆಳೆ ಕಳೆದುಕೊಂಡ ರೈತರಿಗೆ ಬೆಳೆ ಪರಿಹಾರ ಪಾವತಿ ಮತ್ತು ಕೃಷಿಕರ ಬೆಳೆ ಸಾಲ ಮನ್ನಾವನ್ನು ಮೊದಲ ನಿಲುವಳಿಯಾಗಿ ಪ್ರಸ್ತಾಪ ಮಾಡಲಾಗುವುದು' ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಪಾಳಾ ಗ್ರಾಮದಲ್ಲಿ ಮಂಗಳವಾರ ಬರ ವೀಕ್ಷಣೆ ಮಾಡಿ, ರೈತರ ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, 'ವಿರೋಧ ಪಕ್ಷದ ನಾಯಕನಾದ ಬಳಿಕ ಮೊದಲ ಬಾರಿಗೆ ಕಲಬುರಗಿಗೆ ಭೇಟಿ ನೀಡಿ ರೈತರ ಜತೆಗೆ ಮಾತನಾಡಿದ್ದೇನೆ. ಇದುವರೆಗೂ ಬರ ಪರಿಹಾರದ ಹಣ ಬಂದಿಲ್ಲ. ರೈತರು ಅದನ್ನು ಕೊಡಿಸುವಂತೆ ಕೋರಿದ್ದಾರೆ. ಜತೆಗೆ ಬೆಳೆ ಸಾಲ ಮನ್ನಾ ಮಾಡಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ರೈತರು ಮುಂದಿಟ್ಟ ವಿಷಯಗಳನ್ನು ಮುಖ್ಯವಾಗಿ ತೆಗೆದುಕೊಂಡು ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ. ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ' ಎಂದರು.
ಸಾಲ ಮನ್ನಾದಲ್ಲಿ ಕೇಂದ್ರ ಸರ್ಕಾರದ ಪಾತ್ರ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರ ಸರ್ಕಾರಕ್ಕಾಗಿ ಕಾಯದೆ ತಾವೇ ರಾಜ್ಯ ಸರ್ಕಾರದಿಂದ ರೈತರ ಬೆಳೆ ಸಾಲ ಮನ್ನಾ ಮಾಡಿದ್ದರು' ಎಂದು ಹೇಳಿದರು.
'ಇಡೀ ರಾಜ್ಯಕ್ಕೆ ತೊಗರಿಯನ್ನು ಪೂರೈಸುವ ಜಿಲ್ಲೆ ಕಲಬುರಗಿಯಾಗಿದೆ. ಮುಂಗಾರು ವಿಳಂಬದಿಂದಾಗಿ ಜುಲೈನಲ್ಲಿ ತೊಗರಿ ಬಿತ್ತನೆ ಆಗಿತ್ತು. ಮಾರನೇ ತಿಂಗಳು ಮಳೆ ಬಾರದ ಕಾರಣ ಬೆಳೆ ನಾಶ ಮಾಡಿ, ಮತ್ತೆ ಬಿತ್ತನೆ ಮಾಡಿದ್ದರು. ಮಳೆ ಕೊರತೆಯಿಂದಾಗಿ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಆರು ಅಡಿ ಎತ್ತರ ಬೆಳೆಯಬೇಕಿದ್ದ ತೊಗರಿ, ಎರಡ್ಮೂರು ಅಡಿಯಷ್ಟಿದೆ. ಗಿಡದಲ್ಲಿ ಹೂ ಬಿಟ್ಟಿದ್ದರೂ ತೊಗರಿ ಕಾಯಿ ಟೊಳ್ಳಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ' ಎಂದರು.
'ರಾಜ್ಯದಾದ್ಯಂತ ಪ್ರವಾಸ ಮಾಡಿ, ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ರೈತರ ಖಾತೆಗೆ ಪರಿಹಾರದ ಹಣ ಜಮೆಯಾಗಿಲ್ಲ. ನಾನೂ ಕೂಡ ಕಂದಾಯ ಸಚಿವ ಆಗಿದ್ದೆ. ಎಸ್‌ಡಿಆರ್‌ಎಫ್ ಉಸ್ತುವಾರಿ ಆಗಿದ್ದೆ. ಪರಿಹಾರ ಕೊಡಲು ಎಂಟು ತಿಂಗಳು ಆಗುತ್ತಿತ್ತು. ಇದಕ್ಕಾಗಿ ಪ್ರತ್ಯೇಕ ಆ್ಯಪ್ ಮಾಡಿ ಎರಡು ತಿಂಗಳ ಒಳಗೆ ಪರಿಹಾರ ಕೊಡುವ ವ್ಯವಸ್ಥೆ ಮಾಡಿದ್ದೆ. ಈ ಭಾಗದಲ್ಲಿ ಪ್ರವಾಹ ಆದಾಗ ರಾಜ್ಯ ಸರ್ಕಾರದಿಂದ ₹280 ಕೋಟಿ ಪರಿಹಾರ ಕೊಟ್ಟಿದ್ದೆವು. ಕೇಂದ್ರ ಸರ್ಕಾರದ ಕಡೆ ನೋಡಿರಲಿಲ್ಲ. ಆ ಮೇಲೆ ಕೇಂದ್ರ ಸರ್ಕಾರದ ಹಣ ಬಂದು ರಾಜ್ಯ ಸರ್ಕಾರದ ಖಜಾನೆಗೆ ಜಮೆ ಆಗುತ್ತೆ. ಇದು ಸಾಮಾನ್ಯ ಪ್ರಕ್ರಿಯೆ. ಬಹುಶಃ ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿರಬೇಕು. ಅದಕ್ಕಾಗಿ ಪರಿಹಾರ ಕೊಡಲು ತಡ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ' ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮುಡ್, ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್, ಪಕ್ಷದ ಶಿವಣಗೌಡ ರದ್ದೇವಾಡಿ, ಮಾಜಿ ಶಾಸಕ ದತ್ತಾತ್ರೇಯ ಸಿ ಪಾಟೀಲ್ ರೇವೂರ್, ಅಮರನಾಥ್ ಪಾಟೀಲ್, ಚಂದು ಪಾಟೀಲ್ ಸೇರಿದಂತೆ ಹಲವರು ಇದ್ದರು.