ದಾವಣಗೆರೆ: ಪ್ರಧಾನ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ,ಲೇಖಕ ಬಿ.ಶ್ರೀನಿವಾಸರಿಗೆ ಸನ್ಮಾನ

Update: 2023-08-16 12:18 GMT

ದಾವಣಗೆರೆ : ಬಿಡುವಿರದ ಕೆಲಸಗಳ ಮಧ್ಯೆಯೂ ಸೃಜನಶೀಲ ಬರಹಗಾರರಾಗಿ ನ್ಯಾಯಾಂಗ ಇಲಾಖೆಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿರುವ ಪ್ರಧಾನ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ.ಶ್ರೀನಿವಾಸ ಅವರನ್ನು ದಾವಣಗೆರೆ ಜಿಲ್ಲಾ ನ್ಯಾಯಾಧೀಶರುಗಳು ಹಾಗೂ ಜಿಲ್ಲಾ ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್ ಹೆಗಡೆ ಅವರು ಮಾತನಾಡಿ, ಕನ್ನಡಕ್ಕೆ ಹಲವಾರು ಮೌಲಿಕ ಕೃತಿಗಳನ್ನು ನೀಡಿರುವ ಬಿ.ಶ್ರೀನಿವಾಸರವರ ಕಾರ್ಯಕ್ಕೆ ಮನದುಂಬಿ ಹಾರೈಸುವೆ.ಅವರು ನ್ಯಾಯಾಂಗ ಇಲಾಖೆಯ ಹೆಮ್ಮೆ.ಅವರ ಬರಹಗಳ ತುಂಬಾ ಹಬ್ಬಿರುವ ಸಾಮಾಜಿಕ ಕಳಕಳಿಯನ್ನು, ಓದುಗನ ಎದೆಗೂ ಇಳಿಸುವ ರೀತಿಯಿಂದಾಗಿ ಕೃತಿಗಳ ಮೌಲ್ಯವೂ ಹೆಚ್ಚಾಗಿದೆ ಎಂದರು.ಕನ್ನಡ ಸಾರಸ್ವತ ಲೋಕಕ್ಕೆ ಅವರಿಂದ ಮತ್ತಷ್ಟು ಕೃತಿಗಳು ಬರಲಿ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ ಮಾತನಾಡಿ, ಶ್ರೀನಿವಾಸರ "ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು"ಓದುಗನ ಎದೆಯಲ್ಲಿ ತಳಮಳವನ್ನು,ತಣ್ಣನೆಯ ಕ್ರೌರ್ಯಕ್ಕೆ ಪ್ರತಿರೋಧವನ್ನು,ಅಲ್ಲಲ್ಲಿ ಬಂಡಾಯವನ್ನು ಸಾರುತ್ತಲೇ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದರ ಬಗ್ಗೆ ಇವರ ಚಿತ್ರಗಳು  ಮಾತನಾಡುತ್ತವೆ.ಏನೂ ಇಲ್ಲವೆಂದರೂ ಕೃತಿಯ ಅಕ್ಷರಗಳಲ್ಲಿ ಹುದುಗಿರುವ ಗಾಢ ವಿಷಾದವನ್ನು ಓದುಗರಲ್ಲೂ ಮೂಡಿಸಿ ಪಾಪಪ್ರಜ್ಞೆಯಲ್ಲಿ ಮನಸ್ಸನ್ನು ಭಾರವಾಗಿಸುತ್ತವೆ ಎಂದರು.

ಈಗಾಗಲೇ ಕನ್ನಡ ಸಾಹಿತ್ಯದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರ ಕೃತಿಗಳು ಸಹ ಹಲವು ಮುದ್ರಣಗಳನ್ನು ಕಂಡಿವೆ,ಇಂತಹ ಪ್ರತಿಭಾವಂತರು ಇಲಾಖೆಗೆ ಮುಕುಟ ಮಣಿ ಇದ್ದಂತೆ,ಇವರ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಹೆಗಡೆಯವರ ನಡೆ ಕೂಡ ಪ್ರಶಂಸನೀಯ ಎಂದರು.

ಮುಖ್ಯ ಆಡಳಿತಾಧಿಕಾರಿ ಬಿ.ಶ್ರೀನಿವಾಸ ಮಾತನಾಡಿ,ಮನುಷ್ಯನನ್ನು ಮತ್ತಷ್ಟು ಮಾನವೀಯಗೊಳಿಸಲು ಬರಹಕ್ಕೆ ಇಳಿದೆ ಎಂದು ನುಡಿದರು

ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರುಗಳು,ವಕೀಲರು ಹಾಗೂ ನ್ಯಾಯಾಲಯಗಳ ಸಿಬ್ಬಂದಿವರ್ಗ ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಬಸವರಾಜ ಗೋಪನಾಳ್ ಸ್ವಾಗತಿಸಿ,ಕಾರ್ಯದರ್ಶಿ ಎಸ್.ಬಸವರಾಜ ನಿರೂಪಿಸಿದರು.ಸಹಕಾರ್ಯದರ್ಶಿ ಮಂಜುನಾಥ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News