ದಾವಣಗೆರೆ: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು
Update: 2023-09-30 15:24 GMT
ದಾವಣಗೆರೆ: ಭೂ ಪರಿವರ್ತನೆಗಾಗಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುವಾಗ ಹರಿಹರ ತಾಲೂಕು ಪಂಚಾಯತ್ ಇಒ ರವಿ ಹಾಗೂ ಸಾರಥಿ ಗ್ರಾಪಂ ಪಿಡಿಒ ರಾಘವೇಂದ್ರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆಯ ಹರಿಹರದ ಬಳಿಯ ಅಮರಾವತಿ ಕಾಲೋನಿಯಲ್ಲಿ ಪಿಡಿಒ ರಾಘವೇಂದ್ರ ಅವರ ನಿವಾಸದಲ್ಲಿ 1.50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಒ ರವಿ ಅವರ ನಿರ್ದೇಶನದಂತೆ ಪಿಡಿಓ ಲಂಚ ಸ್ವೀಕಾರಿಸಿದ ಹಿನ್ನೆಲೆ ರವಿ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾಳಿಯಲ್ಲಿ ಲೋಕಾಯುಕ್ತ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ ನಿರೀಕ್ಷಕರಾದ ಮಧುಸೂದನ, ಪ್ರಭು ಸೂರಿನ್, ಹೆಚ್.ಎಸ್.ರಾಷ್ಟ್ರಪತಿ, ಠಾಣೆಯ ಸಿಬ್ಭಂದಿಗಳಾದ ಆಂಜನೇಯ, ವೀರೇಶಯ್ಯ, ಧನರಾಜ್, ಲಿಂಗೇಶ್, ಮಲ್ಲಿಕಾರ್ಜುನ್ , ಗೀರೀಶ್, ಕೋಟೆನಾಯ್ಕ್, ಕೃಷ್ಣನಾಯ್ಕ, ಬಸವರಾಜ, ಜಂಷಿದ್ ಖಾನಂ ಟ್ರ್ಯಾಪ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.