ಎಚ್.ಡಿ.ಕುಮಾರಸ್ವಾಮಿಯಿಂದ 50 ಕೋಟಿ ರೂ.ಗೆ ಬೇಡಿಕೆ : ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ʼಉಪಾಧ್ಯಕ್ಷʼ ಗಂಭೀರ ಆರೋಪ

Update: 2024-10-01 15:59 GMT

ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ 50 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟು, ಬೆದರಿಕೆ ಹಾಕಿದ್ದಾರೆ ಎಂದು ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ʼಉಪಾಧ್ಯಕ್ಷʼ ವಿಜಯ್ ಟಾಟಾ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕುಮಾರಸ್ವಾಮಿ ಸ್ನೇಹಿತ ಪರಿಷತ್ ಮಾಜಿ ಸದಸ್ಯ ರಮೇಶ್‍ಗೌಡ ಅವರ ಮೊಬೈಲ್ ಮೂಲಕ ಕರೆ ಮಾಡಿ, ನಿಖಿಲ್ ಕುಮಾರಸ್ವಾಮಿ ಉಪಚುನಾವಣೆಗೆ ನಿಲ್ಲುತ್ತಿರುವುದರಿಂದ 50 ಕೋಟಿ ರೂ.ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು ಎಂದು ದೂರಿದರು.

ಬೇಡಿಕೆ ಇಟ್ಟ ಹಣ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಕ್ಕಾಗಿ, ರಮೇಶ್‍ಗೌಡ ಮೂಲಕ ಹಣ ನೀಡಲಿಲ್ಲವೆಂದರೆ ಬೆಂಗಳೂರಿನಲ್ಲಿ ಬದುಕುವುದಕ್ಕೆ ಸಾಧ್ಯವಿಲ್ಲ. ನಿನ್ನ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುವುದಕ್ಕೆ ಆಗುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಇದಾದ ನಂತರ ಕುಮಾರಸ್ವಾಮಿ ವಿಜಯ್ ಟಾಟಾ ಯಾರೋ ಗೊತ್ತಿಲ್ಲ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

2019ರಲ್ಲಿ ನಿಖಿಲ್ ಕುಮಾರಸ್ವಾಮಿ ಪರವಾಗಿ 8 ಜನರ ಸಚಿವ ಸಂಪುಟದ ಜೊತೆ ಸೇರಿ ಚುನಾವಣಾ ಪ್ರಚಾರ ಮಾಡಿದ್ದೇನೆ. ದೇವೇಗೌಡ ನನಗೆ ಅಧಿಕೃತವಾಗಿ ಪಕ್ಷದ ಪತ್ರ ನೀಡಿದ್ದಾರೆ. ಇದೀಗ ನಾನು ಯಾರೋ ಗೊತ್ತಿಲ್ಲ, ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ 2 ಸಾವಿರ ದೂರುಗಳಿವೆ ಎಂದು ಆರೋಪಿಸುತ್ತಿದ್ದಾರೆ. ನನ್ನ ವಿರುದ್ದ 2 ದೂರುಗಳನ್ನು ತೋರಿಸಲಿ, ನಾನು ಪಕ್ಷ ಬಿಡುತ್ತೇನೆ. ಕೇಂದ್ರ ಸಚಿವರಾಗಿ ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ ಎಂದು ಹೇಳಿದರು.

‘ವಿಜಯ್ ಟಾಟಾ ಎಂಬ ವ್ಯಕ್ತಿಯು, ಜೆಡಿಎಸ್‍ನ ಸಾಮಾಜಿಕ ಜಾಲತಾಣಗಳ ವಿಭಾಗದ ʼಉಪಾಧ್ಯಕ್ಷʼ ಎಂದು ಸುಳ್ಳು ಹೇಳಿಕೊಂಡು, ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾನೆ. ಈ ವ್ಯಕ್ತಿ ಜೆಡಿಎಸ್‍ನಲ್ಲಿ ಯಾವುದೇ ಸ್ಥಾನಮಾನ ಹೊಂದಿಲ್ಲ ಹಾಗೂ ಈತನಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಸುಳ್ಳನ್ನೇ ಬಂಡವಾಳ ಮಾಡಿಕೊಂಡು, ಪ್ರಚಾರ ಅಥವಾ ಆಮಿಷಕ್ಕೆ ಒಳಗಾಗಿ, ಎಚ್‍ಡಿಕೆ ಹೆಸರಿಗೆ ಮಸಿ ಬಳಿಯಲು ಸಲ್ಲದ ಆರೋಪ ಮಾಡುತ್ತಿದ್ದು, ಈತನ ವಿರುದ್ಧ ಶೀಘ್ರ ದೂರು ದಾಖಲಿಸಲಾಗುವುದು’

-ಚಂದನ್ ಎಚ್.ಎಸ್., ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News