ಭದ್ರಾ ನೀರು ಹರಿಸುವಂತೆ ಒತ್ತಾಯ: ದಾವಣಗೆರೆ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Update: 2023-09-25 06:08 GMT

ದಾವಣಗೆರೆ: ಭದ್ರಾ ಬಲದಂಡೆ ನಾಲೆಗಳಿಗೆ ನೀರು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಭಾರತೀಯ ರೈತ ಒಕ್ಕೂಟದ ವತಿಯಿಂದ ಸೋಮವಾರ ಕರೆ ಕೊಟ್ಟಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಇಲ್ಲಿನ ಜಯದೇವ ವೃತ್ತದಲ್ಲಿ ಬೆಳ್ಳಂಬೆಳಿಗ್ಗೆ ಜಮಾಯಿಸಿದ ರೈತ ಒಕ್ಕೂಟದ ಸದಸ್ಯರು ನಗರದ ವಿವಿಧ ಕಡೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಭದ್ರಾ ನೀರಿನ ಬಗ್ಗೆ ಅರಿವು ಮೂಡಿಸಿದರು.

ಗಾಂಧಿ ವೃತ್ತದಲ್ಲಿ ಸಂಚಾರ ಮಾಡುತ್ತಿದ್ದ ಖಾಸಗಿ , ಕೆಎಸ್ಸಾರ್ಟಿಸಿ ಬಸ್‌ಗಳನ್ನು ತಡೆದು ಬಂದ್‌ಗೆ ಬೆಂಬಲ ನೀಡಿ ಎಂದು ಚಾಲಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್‌ಗಳು, ಶಾಲಾ, ಕಾಲೇಜುಗಳು, ಆಸ್ಪತ್ರೆಗಳು, ಆಂಚೆ ಕಚೇರಿಗಳು ಎಲ್ಲಾ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅದರೆ, 10 ರ ನಂತರ ಖಾಸಗಿ ಮತ್ತು ಸರಕಾರಿ ಬಸ್ ನಿಲ್ದಾಣಗಳಲ್ಲಿ ಬಸ್ ಇಲ್ಲದ ಕಾರಣದಿಂದ ಜನರು ಪರದಾಡಿದ ದೃಶ್ಯಗಳು ಕಂಡುಬಂದವು.

ರೈತ ಮುಖಂಡ ಬೆಳವನೂರು ನಾಗೇಶ್ವರರಾವ್ ಮಾತನಾಡಿ, ಸತತ 100 ದಿನಗಳ ಕಾಲ ನಾಲೆಗಳಲ್ಲಿ ನೀರು ಹರಿಸಬೇಕು. ಆದರೆ, ರಾಜ್ಯ ಸರ್ಕಾರ ಮಾತಿಗೆ ತಪ್ಪಿದೆ ಎಂದು ಕಿಡಿಕಾರಿದರು

100 ದಿನಗಳ ಕಾಲ ನೀರು ನೀಡುವುದಾಗಿ ಹೇಳಿದ್ದ ಸರ್ಕಾರ ಕೇವಲ 40 ದಿನಗಳ ಕಾಲ ನೀರು ಹರಿಸಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭದ್ರಾ ನಾಲೆಯಲ್ಲಿ ನಿರಂತರ ನೀರು ಹರಿಯದಿದ್ದರೆ ವಿಷ ಕುಡಿಯುವ ಪರಿಸ್ಥಿತಿ ಎದುರಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .

 

ಮುಖಂಡರಾದ ಕೆ.ಪಿ.ರಾಜೇಶ್ವರಿ ಮಾತನಾಡಿ, ಭದ್ರಾ ನಾಲೆಯಲ್ಲಿ ನೀರು ಹರಿಸಿದ ಕಾರಣ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ನಾಟಿ ಮಾಡಿದ್ದು, ನಾಲೆಯಲ್ಲಿ ನೀರು ನಿಲುಗಡೆ ಮಾಡಿರುವ ಕಾರಣ ಭತ್ತದ ಬೆಳೆ ಒಣಗುತ್ತಿದೆ. ಇದರಿಂದಾಗಿ ಕೋಟ್ಯಂತರ ನಷ್ಟ ಅಗುತ್ತಿದೆ. ಕಾರಣ ಈ ಕೂಡಲೇ ಸರ್ಕಾರ ತನ್ನ ಆದೇಶವನ್ನು ಬದಲಿಸಿ ಈ ಕೂಡಲೇ ನೀರು ಹರಿಸಿ ರೈತರ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು.

ಕೆ.ಪಿ.ಕಲ್ಲಿಂಗಪ್ಪ, ಶಾಮನೂರು ಹೆಚ್.ಆರ್.ಲಿಂಗರಾಜ, ಬಿ.ಜಿ.ಅಜಯ್ ಕುಮಾರ್, ಬಿ.ಎಂ.ಸತೀಶ್, ಎಸ್.ಜಿ.ಸೋಮಶೇಖರ್, ವೈ.ಮಲ್ಲೇಶ್, ಹೆಚ್.ಎನ್.ಗುರುನಾಥ, ಕುಂದವಾಡದ ಹೆಚ್.ಜಿ.ಗಣೇಶಪ್ಪ, ಶ್ರೀನಿವಾಸ್ ದಾಸಕರಿಯಪ್ಪ, ಕೆ.ಟಿ.ಕಲ್ಲೇಶ್, ಕರವೇಯ ಐಗೂರು ಸುರೇಶ್, ಹೆಚ್.ಎನ್.ಹಾಲೇಶ್, ಯೋಗೇಶ್, ಶ್ರೀನಿವಾಸ್, ಎಸ್.ಟಿ.ವೀರೇಶ್, ಲೋಕಿಕೆರೆ ನಾಗರಾಜ್, ಎನ್.ರಾಜಶೇಖರ, ಟಿಂಕರ್ ಮಂಜಣ್ಣ, ಡಾ.ಟಿ.ಜಿ.ರವಿಕುಮಾರ್, ಅಣಬೇರು ಜೀವನಮೂರ್ತಿ, ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News