ಬಡತನ ಲೆಕ್ಕಿಸದೆ ಕ್ರಿಕೆಟ್ ತರಬೇತಿ ನೀಡುತ್ತಿರುವ ತಿಮ್ಮೇಶ್

Update: 2024-02-26 10:21 GMT

ದಾವಣಗೆರೆ: ಮನೆಯಲ್ಲಿ ಬಡತನ, ಕೂಲಿ ಮಾಡಿದರೆ ಜೀವನ. ಇದ್ಯಾವುದನ್ನೂ ಲೆಕ್ಕಿಸದೆ ಒಬ್ಬ ಹುಡುಗನನ್ನಾದರೂ ಭಾರತ ತಂಡದಲ್ಲಿ ಆಡಿಸಬೇಕೆಂಬ ಛಲ. ಇಂತಹದೊಂದು ಕನಸಿನೊಂದಿಗೆ ತರಬೇತುದಾರರೋರ್ವರು ತಾಲೀಮು ನಡೆಸುತ್ತಿದ್ದಾರೆ.

ಹೌದು, ದಾವಣಗೆರೆಯ ತಿಮ್ಮೇಶ್ ಎಂಬವರು ಬಡ ಮಕ್ಕಳಿಗೆ ಲೆದರ್ ಬಾಲ್ ಕ್ರಿಕೆಟ್ ತರಬೇತಿ ನೀಡುವ ತರಬೇತುದಾರ. ಹೈಸ್ಕೂಲ್ ಮೈದಾನದ ಟೆನ್ನಿಸ್ ಕ್ರೀಡಾಂಗಣ ಪಕ್ಕದ ಚಿಕ್ಕದೊಂದು ಮೂಲೆಯ ಜಾಗದಲ್ಲಿ ಅವರು ಇದುವರೆಗೆ ಬರೋಬರಿ 2,500ಕ್ಕೂ ಹೆಚ್ಚು ಮಕ್ಕಳಿಗೆ ಲೆದರ್ಬಾಲ್ ಕ್ರಿಕೆಟ್ ತರಬೇತಿ ನೀಡಿದ್ದಾರೆ.

ಕೇವಲ 8ನೇ ತರಗತಿ ಓದಿರುವ ತಿಮ್ಮೇಶ್ ಅವರು ಕಳೆದ 17 ವರ್ಷಗಳಿಂದ ಬಡ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಅದರಲ್ಲಿಯೂ ಕಡು ಬಡತನದಲ್ಲಿರುವ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಸರಕಾರಿ ಶಾಲೆಯ 15 ಮಕ್ಕಳು ಆಯ್ಕೆಯಾದರೆ, ರಾಷ್ಟ್ರಮಟ್ಟಕ್ಕೆ ಮೂವರು ಮಕ್ಕಳು ಆಯ್ಕೆಯಾಗಿದ್ದಾರೆ.

ಸಾಲ ಮಾಡಿ ಕ್ರೀಡಾ ಪರಿಕರ ಖರೀದಿ:

ಪತ್ನಿಯ ಮಾಂಗಲ್ಯ ಸರ ಅಡಮಾನ ಇಟ್ಟು ಹಾಗೂ 10 ಲಕ್ಷ ರೂ. ಸಾಲ ಮಾಡಿ ಬೋಲಿಂಗ್ ಮಿಷನ್ ತಂದಿದ್ದಾರೆ. ಅಲ್ಲದೆ, ಪಿಚ್ ನೆಟ್, ಬಲೆ, ಮ್ಯಾಟ್ ಖರೀದಿಸಿದ್ದು, ಸರಕಾರದ ಯಾವುದೇ ನೆರವು ಇಲ್ಲದೆ ಬಡ ಮತ್ತು ಹಿಂದುಳಿದ ಮಕ್ಕಳಿಗೆ ಬೆಳಗ್ಗೆ ಮತ್ತು ಸಂಜೆ ಲೆದರ್ಬಾಲ್ ಕ್ರಿಕೆಟ್ ತರಬೇತಿ ನೀಡುತ್ತಿದ್ದು, ಮಕ್ಕಳು ಕೊಡುವ ಒಂದಿಷ್ಟು ಹಣದಲ್ಲಿ ಇವರು ಜೀವನ ಸಾಗಿಸುತ್ತಿದ್ದಾರೆ.

ಕ್ರೀಡಾ ಸಾಮಗ್ರಿಗೆ ಮನವಿ ಕೊಟ್ಟರೂ ಬಂದಿಲ್ಲ:

ಎಸ್ಸಿ-ಎಸ್ಟಿ ಬಡ ಮಕ್ಕಳಿಗೆ ಗಿರಿಜನ ಉಪಯೋಜನೆಯಡಿ ಕ್ರೀಡಾ ಸಾಮಗ್ರಿಗಳನ್ನು ನೀಡುವಂತೆ 2015ರ ನವೆಂಬರ್ 23ರಂದು ಅಂದಿನ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಕ್ರೀಡಾ ಸಾಮಗ್ರಿಗಳನ್ನು ಸರಕಾರ ನೀಡಿಲ್ಲ. ಒಂದು ಲೆದರ್ ಬಾಲ್ಗೆ 600 ರೂ., ಒಂದು ಬ್ಯಾಟ್ಗೆ 22 ಸಾವಿರ ರೂ. ನೀಡಿ ಖರೀದಿಸಬೇಕಿದೆ. ಹೀಗಾಗಿ ಇಲ್ಲಿ ಬಡ ಮಕ್ಕಳು ತರಬೇತಿ ಪಡೆಯುತ್ತಿರುವುದರಿಂದ ಆರ್ಥಿಕ ಸಂಕಷ್ಟದಿಂದ ತರಬೇತಿ ನೀಡಲು ಕಷ್ಟವಾಗುತ್ತಿದೆ ಎನ್ನುತ್ತಾರೆ ತರಬೇತುದಾರ ತಿಮ್ಮೇಶ್.

ಬೇಡಿಕೆ ಈಡೇರಿಕೆಗೆ ಆಗ್ರಹ

ತರಬೇತಿ ನೀಡಲು ಪ್ರತ್ಯೇಕ ಒಳಾಂಗಣ ಕ್ರೀಡಾಂಗಣ ವ್ಯವಸ್ಥೆ ಮಾಡಿಕೊಡಬೇಕು. ತರಬೇತಿಗೆ ಬೇಕಾದ ಕ್ರೀಡಾ ಪರಿಕರಗಳನ್ನು ಒದಗಿಸಬೇಕು. ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಿರುದ್ಯೋಗಿ ಕೋಚ್ಗಳಿಗೆ ಸರಕಾರದ ಇಲಾಖೆಗಳಲ್ಲಿ ಅರೆಕಾಲಿಕವಾಗಿಯಾದರೂ ನೇಮಕ ಮಾಡಿಕೊಂಡು ನಮಗೆ ಪ್ರೋತ್ಸಾಹ ನೀಡಬೇಕೆಂದು ತರಬೇತುದಾರ ತಿಮ್ಮೇಶ್ ಆಗ್ರಹಿಸಿದ್ದಾರೆ.

ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಅವರು ಹೈಸ್ಕೂಲ್ ಮೈದಾನದಲ್ಲಿ ಕ್ರೀಡಾಪಟುಗಳಿಗೆ ಪಿಚ್ ನಿರ್ಮಾಣ ಮಾಡಿಕೊಡುವ ಜೊತೆಗೆ ಕ್ರಿಕೆಟ್ ತರಬೇತಿ ನೀಡಲು ಸಾಕಷ್ಟು ನೆರವು ನೀಡಿದ್ದರಿಂದ ಬಡ ಮಕ್ಕಳಿಗೆ ಅನುಕೂಲವಾಗಿದೆ.

ತಿಮ್ಮೇಶ್, ಕ್ರಿಕೆಟ್ ತರಬೇತುದಾರ

ನಮ್ಮ ಕೈಯಲ್ಲಿ ಶುಲ್ಕ ಕಟ್ಟಲು ಆಗದಿದ್ದರೂ ತಿಮ್ಮೇಶ್ ಅವರು ಸಹೋದರನಂತೆ ತರಬೇತಿ ನೀಡಿದ್ದರಿಂದ ರಾಜ್ಯಮಟ್ಟದ 19 ವರ್ಷದೊಳಗಿನ ಕ್ರಿಕೆಟಿನಲ್ಲಿ ಭಾಗವಹಿಸಿದ್ದೇನೆ. ಈಗ ರಣಜಿ ಕ್ರಿಕೆಟ್ನಲ್ಲಿ ಆಡುವ ಆಸೆ ಇದ್ದು, ಅವರ ಮಾರ್ಗದರ್ಶನದಲ್ಲಿ ನಾನು ಆಡಿಯೇ ಆಡುತ್ತೇನೆ.

ಸೈಯದ್ ಗೌಸ್, ತರಬೇತಿ ಪಡೆಯುವ ಕ್ರಿಕೆಟಿಗ

ನನಗೆ ಶುಲ್ಕ ಕಟ್ಟಲು ಆಗುತ್ತಿಲ್ಲ. ನನ್ನ ಆಸಕ್ತಿ ನೋಡಿ ತರಬೇತುದಾರ ತಿಮ್ಮೇಶ್ ಅವರು ಉತ್ತಮವಾಗಿ ಕ್ರಿಕೆಟ್ ಮಾರ್ಗದರ್ಶನ ನೀಡುತ್ತಿದ್ದಾರೆ. ರಣಜಿಯಲ್ಲಿ ಕ್ರಿಕೆಟ್ ಆಡುವ ಆಸೆ ಇದೆ.

ಆಕಾಶ್, ತರಬೇತಿ ಪಡೆಯುತ್ತಿರುವ ಕ್ರಿಕೆಟಿಗ

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಪ್ರಕಾಶ್ ಎಚ್.ಎನ್.

contributor

Similar News