‘ಡಯಾಲಿಸಿಸ್’ ಸೇವೆ ಆರೋಗ್ಯ ವಿಮಾ ವ್ಯಾಪ್ತಿಗೆ: ಸಚಿವ ದಿನೇಶ್ ಗುಂಡೂರಾವ್

Update: 2023-12-07 16:19 GMT

ಸಚಿವ ದಿನೇಶ್ ಗುಂಡೂರಾವ್ 

ಬೆಳಗಾವಿ(ಸುವರ್ಣ ವಿಧಾನಸೌಧ): ‘ಮೂತ್ರಪಿಂಡ(ಕಿಡ್ನಿ) ಸಮಸ್ಯೆಗೊಳಗಾದ ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ಕಲ್ಪಿಸಲು ಒಂದು ತಿಂಗಳ ಒಳಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಯಶಪಾಲ್ ಎ.ಸುವರ್ಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ‘ಈ ಹಿಂದೆ ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿದ್ದ ಇಎಸ್‍ಕೆಎಜಿ ಸಂಸ್ಥೆ ಸಿಬ್ಬಂದಿಗಳಿಗೆ ವೇತನ, ಇಎಸ್‍ಐ, ಪಿಎಫ್ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿರಲಿಲ್ಲ. ಹೀಗಾಗಿ ಸರಕಾರದಿಂದಲೇ ಇಎಸ್‍ಐ, ಪಿಎಫ್ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಗುತ್ತಿಗೆ ಪಡೆದ ಇಎಸ್‍ಕೆಎಜಿ ಸಂಸ್ಥೆಗೆ ಅಸಮರ್ಥ ಸೇವೆಗಾಗಿ ದಂಡ ವಿಸಲಾಗಿದ್ದು, ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

‘ಜೊತೆಗೆ ನಾಲ್ಕು ಕಂದಾಯ ವಿಭಾಗಗಳಲ್ಲೂ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಗೆ ಹೊಸ ಗುತ್ತಿಗೆಗಾಗಿ ಟೆಂಡರ್ ಕರೆಯಲಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ ವಿಭಾಗಗಳ ಗುತ್ತಿಗೆ ಅಂತಿಮಗೊಂಡಿವೆ. ತಿಂಗಳ ಒಳಗಾಗಿ ಹೊಸ ಗುತ್ತಿಗೆದಾರರು ಆಧುನಿಕ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಿದ್ದಾರೆ. ತಂತ್ರಜ್ಞರು ವೇತನ ಪಾವತಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಿ ಉತ್ತಮವಾಗಿ ನಿರ್ವಹಣೆ ನಿರೀಕ್ಷೆಯಿದೆ.

ಈ ಬಾರಿ ಏಕ ಬಳಕೆಯ ಡಯಲೈಸರ್‍ಗಳನ್ನು ಉಪಯೋಗಿಸಲು ನಿರ್ಧರಿಸಲಾಗಿದೆ. ಈ ಮೊದಲು ಬಹು ಬಳಕೆಯ ಡಯಲೈಸರ್‌ಗಳಿಂದಾಗಿ ಸೋಂಕು ವ್ಯಾಪಿಸುವ ಆತಂಕ ಇತ್ತು. ಶುದ್ಧ ನೀರಿನ ಘಟಕ ಸೇರಿದಂತೆ ಹಲವಾರು ಅಗತ್ಯಗಳು ಬೇಕಿದ್ದು, ಏಕ ಬಳಕೆ ಸುರಕ್ಷಿತವಾಗಿದೆ. ಕಲಬುರ್ಗಿ ವಿಭಾಗದ ಟೆಂಡರ್‍ನ ದರದಲ್ಲಿ ಹೊಂದಾಣಿಕೆಯಾಗಿಲ್ಲ. ಹೀಗಾಗಿ ಅಲ್ಲಿಗೆ ಮರು ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.

ಡಯಾಲಿಸಿಸ್ ಕೇಂದ್ರಗಳನ್ನು ಸರ್ಕಾರ 168ರಿಂದ 219ಕ್ಕೆ ಹೆಚ್ಚಿಸಿದೆ. ಡಯಾಲಿಸಿಸ್ ಯಂತ್ರಗಳ ಸಂಖ್ಯೆಯನ್ನು 490ರಿಂದ 800ಕ್ಕೆ ಹೆಚ್ಚಿಸಲಾಗಿದೆ. 59 ಹೊಸ ತಾಲೂಕುಗಳ 48 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮುಷ್ಕರ ನಿರತ ತಂತ್ರಜ್ಞರ ಜೊತೆ ಸಂಧಾನ ನಡೆಸಿದ್ದು, ಅವರ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News