‘ರಾಷ್ಟ್ರೀಯ ಪೆದ್ದ’ನಂತೆ ಮೋದಿ ವರ್ತನೆ: ಸಚಿವ ದಿನೇಶ್ ಗುಂಡೂರಾವ್

Update: 2024-05-30 14:49 GMT

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ‘ವಯಸ್ಸಿನ ಕಾರಣದಿಂದ ಆಗುವ ಅರಳು-ಮರಳಿನಿಂದಲೋ ಅಥವಾ ಚುನಾವಣೆ ಸೋಲುವ ಹತಾಶೆಯಿಂದಲೋ ಇತ್ತೀಚೆಗೆ ಅಸಂಗತವಾಗಿ ಮಾತಾಡುತ್ತಿರುವ ಪ್ರಧಾನಿ ಮೋದಿಯವರು ‘ರಾಷ್ಟ್ರೀಯ ಪೆದ್ದ'ನಂತೆ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ತಮ್ಮ ಎಕ್ಸ್ ಜಾಲತಾಣದ ಖಾತೆಯಲ್ಲಿ ‘ಪ್ರಧಾನಿ ಮೋದಿಯ ಇತ್ತೀಚಿಗಿನ ಸಂದರ್ಶನ’ವನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ಅವರು, ಗಾಂಧಿಯವರ ಕುರಿತು ಸಿನಿಮಾ ಬರುವವರೆಗೂ ಮಹಾತ್ಮ ಗಾಂಧಿ ಯಾರೆಂದು ಗೊತ್ತಿರಲಿಲ್ಲ ಎಂಬ ಮೋದಿಯವರ ಪೆದ್ದತನದ ಹೇಳಿಕೆ ಅವರ ಬೌದ್ಧಿಕ ಮಟ್ಟದ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಮಹಾತ್ಮ ಗಾಂಧಿಯವರು, ಮಾರ್ಟಿನ್ ಲೂಥರ್ ಕಿಂಗ್, ಅಬ್ರಾಹಂ ಲಿಂಕನ್, ನೆಲ್ಸನ್ ಮಂಡೇಲಾರಂತೆ ಜಾಗತಿಕ ಮನ್ನಣೆ ಪಡೆದಿದ್ದ ವಿಶ್ವ ನಾಯಕ. ಮೋದಿಯವರಂತೆ ಸ್ವಯಂ ಘೋಷಿತ ವಿಶ್ವಗುರು ಹಾಗೂ ದೇವಮಾನವರಾಗಿರಲಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಂವಹನ ಮಾಧ್ಯಮಗಳು ಬಲಿಷ್ಠವಾಗಿರದ ಆ ಕಾಲದಲ್ಲೂ ಗಾಂಧೀಜಿಯವರ ಅಹಿಂಸಾ ತತ್ವ, ಹರತಾಳ, ಹಾಗೂ ಸತ್ಯಾಗ್ರಹಗಳು ವಿಶ್ವದ ಗಮನ ಸೆಳೆದಿದ್ದವು. ಚಲನಚಿತ್ರ ಬಂದ ಮೇಲೆ ಗಾಂಧೀಜಿ ಯಾರೆಂದು ತಿಳಿಯಿತು ಎಂಬ ಪ್ರಧಾನಿಯವರ ಹೇಳಿಕೆ ಇತಿಹಾಸದ ಬಗ್ಗೆ ಅವರಿಗಿರುವ ಅಜ್ಞಾನ ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

ಇತ್ತಿಚೆಗಂತೂ ಪ್ರಧಾನಿ ಮೋದಿಯವರು ಮೆದುಳು ಹಾಗೂ ನಾಲಗೆಗೆ ಸಂಪರ್ಕವೇ ಇಲ್ಲದಂತೆ ಮಾತಾಡುತ್ತಿದ್ದಾರೆ. ಸಿನಿಮಾ ಬಂದ ಮೇಲೆ ಮಹಾತ್ಮ ಗಾಂಧಿ ಯಾರೆಂದು ತಿಳಿಯಿತು ಎಂಬ ಅವರ ಹೇಳಿಕೆಗೆ ನಗಬೇಕೋ ಅಥವಾ ಅಳಬೇಕೋ ಎಂಬ ಗೊಂದಲ ಜನರನ್ನು ಕಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮೋದಿಯವರ ಪ್ರಕಾರವೇ ಹೇಳುವಾದರೆ, ಧಾರವಾಹಿಗಳ ರೂಪದಲ್ಲಿ ಟಿವಿಯಲ್ಲಿ ಪ್ರಸಾರವಾದ ಮೇಲೆಯೇ ರಾಮಾಯಣ-ಮಹಾಭಾರತ ಜನರಿಗೆ ಗೊತ್ತಾಯಿತು ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಪ್ರಧಾನಿ ಮೋದಿಯವರು ಯಾಕೆ ಇಷ್ಟೊಂದು ಅಸಂಬದ್ಧವಾಗಿ ಮಾತಾಡುತ್ತಿದ್ದಾರೋ ಅರ್ಥವೇ ಆಗುತ್ತಿಲ್ಲ. ಏನಾಗಿದೆ ಮೋದಿಯವರಿಗೆ.,? ಎಂದು ಅವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News