ಆರೋಗ್ಯ ವಿಮೆ ಮೇಲಿನ ತೆರಿಗೆ ಮರು ಪರಿಶೀಲನೆಗೆ ಶಿಫಾರಸು ಮಾಡುವಂತೆ ಪ್ರಧಾನಿಗೆ ಪತ್ರ ಬರೆದ ದಿನೇಶ್ ಗುಂಡೂರಾವ್
ಬೆಂಗಳೂರು: ಆರೋಗ್ಯ ವಿಮೆಯ ಮೇಲಿನ 18 ಶೇ. ತೆರಿಗೆಯನ್ನು ಮರುಪರಿಶೀಲನೆಗೆ ಶಿಫಾರಸು ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.
ಸೆ.9ರಂದು ನಡೆಯಲಿರುವ GST ಕೌನ್ಸಿಲ್ ಸಭೆಯಲ್ಲಿ ಮಧ್ಯಮ ಮತ್ತು ಕಡಿಮೆ ಆದಾಯದ ಪಾಲಿಸಿದಾರರಿಗೆ ಆರೋಗ್ಯ ವಿಮೆಯ ಮೇಲಿನ 18 ಶೇ. ತೆರಿಗೆಯನ್ನು ಮರು ಪರಿಶೀಲಿಸುವಂತೆ ಶಿಫಾರಸು ಮಾಡುವಂತೆ ಕೋರುತ್ತೇನೆ. 2047ರಲ್ಲಿನ ಆರೋಗ್ಯ ವಿಮೆಯಲ್ಲಿನ ಸಾರ್ವತ್ರೀಕರಣದ ದೃಷ್ಟಿಯಿಂದ ಇದು ಧನಾತ್ಮಕ ಹೆಜ್ಜೆಯಾಗಲಿದೆ ಎಂದು ದಿನೇಶ್ ಗುಂಡೂರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸರಕಾರ ಒದಗಿಸುವ ಎಲ್ಲಾ ಅಗತ್ಯ ಸೇವೆಗಳಲ್ಲಿ, ಆರೋಗ್ಯ ವ್ಯವಸ್ಥೆಯಷ್ಟು ಬೇರೆ ಯಾವುದೂ ವ್ಯಾಪಕವಾಗಿ ಜನರ ಮೇಲೆ ಪರಿಣಾಮ ಬೀರುವುದಿಲ್ಲ. ಆರೋಗ್ಯ ವಿಮೆಗಳು ಮತ್ತು ವೈದ್ಯಕೀಯ ಸೌಲಭ್ಯಗಳು ಸಮಾಜದ ಯೋಗಕ್ಷೇಮದ ಮೇಲೆ ನೇರವಾಗಿ ಪರಿಣಾಮ ಬೀರುವವುಗಳಾಗಿವೆ. ಭಾರತದಲ್ಲಿ ಇದೀಗ ವಿಶಾಲವಾದ ಆರೋಗ್ಯ ವ್ಯವಸ್ಥೆಗಳಿವೆ.
ಭಾರತವು ನಿಸ್ಸಂಶಯವಾಗಿ ಮೂಲಭೂತ ಆರೋಗ್ಯದ ಅವಶ್ಯಕತೆಗಿಂತ ಬಹಳ ದೂರ ಸಾಗಿದೆ, ಈಗ ವಿಶ್ವಾದ್ಯಂತ ಅತಿದೊಡ್ಡ ಆರೋಗ್ಯ ವ್ಯವಸ್ಥೆಯನ್ನು ಹೊಂದಿದ್ದು, ಶತಕೋಟಿಗೂ ಹೆಚ್ಚು ಜನರಿಗೆ ಆರೋಗ್ಯ ಸೌಲಭ್ಯಗಳು ಸಿಗುತ್ತಿವೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಆರೋಗ್ಯ ಸೇವೆಗಳು ಕೈಗೆಟಕುವಂತೆ ಮಾಡಲು ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯಕ್ಕೆ ಆರೋಗ್ಯ ರಕ್ಷಣೆಯಾಗಿ ನೀಡುವ ಮೊದಲೇ 2018ರಲ್ಲಿ 'ಆರೋಗ್ಯ ಕರ್ನಾಟಕ ಯೋಜನೆ'ಯನ್ನು ತಂದಿದ್ದೇವೆ. ಈ ಮೂಲಕ ಜನರಿಗೆ ಆರೋಗ್ಯ ಸೇವೆಗಳು ಕೈಗೆಟಕುವಂತೆ ಮಾಡಲು ಸರಕಾರ ಅವಿರತವಾಗಿ ಶ್ರಮಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಸರಕಾರವು ʼ2047ರ ವೇಳೆಗೆ ಸಾರ್ವತ್ರಿಕ ವಿಮಾ ಕವರೇಜ್ʼ ಗುರಿಯನ್ನು ಸಾಧಿಸಲು ರಾಷ್ಟ್ರವ್ಯಾಪಿ ಯೋಜನೆ ಪ್ರಾರಂಭಿಸುವ ಮೂಲಕ ಆರೋಗ್ಯ ವಿಮೆಯ ಪ್ರಾಮುಖ್ಯತೆಯನ್ನು ವ್ಯಕ್ತಪಡಿಸಿದೆ. ಮಾನವನ ಸ್ಥಿತಿ, ಪರಿಸರ ಮತ್ತು ಹೊಸ ಪೀಳಿಗೆಯ ಅನಿರೀಕ್ಷಿತತೆಯು ಸಮಯದಲ್ಲಿ ರಕ್ಷಿಸಲು ಆರೋಗ್ಯ ಅನಿವಾರ್ಯವಾಗಿದೆ. ಅದಕ್ಕಾಗಿಯೇ ಯೂನಿವರ್ಸಲ್ ಇನ್ಶೂರೆನ್ಸ್ ದೃಷ್ಟಿಕೋನವನ್ನು ಪ್ರತಿಪಾದಿಸುವ ಸರಕಾರವು ಆರೋಗ್ಯ ವಿಮೆಯನ್ನು ಸಂಪೂರ್ಣವಾಗಿ ನಿರುತ್ಸಾಹಗೊಳಿಸುವಷ್ಟು ಹೆಚ್ಚಿನ ದರದಲ್ಲಿ ತೆರಿಗೆ ವಿಧಿಸುವುದು ದುರದೃಷ್ಟಕರ ಮಾತ್ರವಲ್ಲ, ವಿಪರ್ಯಾಸವೂ ಆಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆರೋಗ್ಯ ವಿಮೆ ಮೇಲಿನ GST 18 ಶೇ. ತೆರಿಗೆಯ ಅತ್ಯಧಿಕವಾಗಿದೆ ಮತ್ತು 2017ರಿಂದಲೂ ಇದು ಮುಂದುವರಿದಿದೆ. ರಾಜಕಾರಣಿಗಳು ಮತ್ತು ನೀತಿ ನಿರೂಪಕರು ಸೇರಿದಂತೆ ಹಲವರ ಪ್ರತಿಭಟನೆಗಳ ಹೊರತಾಗಿಯೂ ಜಿಎಸ್ಟಿಯಲ್ಲಿ ಹೆಚ್ಚಳ ಮುಂದುವರಿದಿದೆ. ಅತ್ಯಗತ್ಯ ಸೇವೆ, ಅವಶ್ಯ ವಸ್ತುಗಳ ಮೇಲಿನ ಜಿಎಸ್ಟಿ ಹೆಚ್ಚಳ, ವಿಶೇಷವಾಗಿ ಸಾಂಕ್ರಾಮಿಕದ ನಂತರದಲ್ಲಿ ಅದು ಮುಂದುವರಿದಿರುವುದು ಸೂಕ್ತವಲ್ಲ. GSTಯ ಹೆಚ್ಚಿನ ದರವು ಆರೋಗ್ಯ ವಿಮೆ ಮೇಲೆ ನೇರ ಪರಿಣಾಮ ಬೀರುತ್ತದೆ ಅಂದರೆ ಆರೋಗ್ಯ ವಿಮೆಯು ದುಬಾರಿಯಾಗುತ್ತಿದೆ ಎಂದವರು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತೆರಿಗೆಗಳ ಏರಿಕೆ ಮೇಲ್ವರ್ಗದ ಆರ್ಥಿಕ ವರ್ಗದ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ ಆದರೆ ಇದು ಆರ್ಥಿಕವಾಗಿ ಹಿಂದುಳಿದಿರುವವರ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಇದರಿಂದ ಜನರು ಆರೋಗ್ಯ ವಿಮೆಯನ್ನು ಪಡೆದುಕೊಳ್ಳಲು ಹಿಂಜರಿಯುತ್ತಾರೆ. ಇದು ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆರೋಗ್ಯದ ತುರ್ತಿನ ಸಮಯದಲ್ಲಿ ಜನರನ್ನು ಸಂಕಷ್ಟಕ್ಕೆ ತಳ್ಳುತ್ತದೆ ಎಂದು ದಿನೇಶ್ ಗುಂಡೂರಾವ್ ಪತ್ರದ ಮೂಲಕ ಪ್ರಧಾನಿಯ ಗಮನ ಸೆಳೆದಿದ್ದಾರೆ.