ಪತ್ರಿಕಾ ವಿತರಕರಿಗೂ ಕಾರ್ಮಿಕ ಇಲಾಖೆ ಸವಲತ್ತು ನೀಡಲು ಸಚಿವರ ಜತೆ ಚರ್ಚೆ: ಕೆ.ವಿ.ಪ್ರಭಾಕರ್
ಬೆಂಗಳೂರು: ಪತ್ರಿಕಾ ವಿತರಕರಿಗೂ ಕಾರ್ಮಿಕ ಇಲಾಖೆ ಸವಲತ್ತು ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಜತೆ ಚರ್ಚಿಸಿದ್ದೇನೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.
ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಪತ್ರಿಕಾ ವಿತರಕರ ಸೇವೆಯನ್ನು ಪರಿಗಣಿಸಬೇಕು ಹಾಗೂ ಅಂತಹ ಹಿರಿಯರಿಗೂ ಗೌರವ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಅವರು ಸ್ಪಂದಿಸಿದ್ದಾರೆ ಎಂದರು.
ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುವ ಸುದ್ದಿಮನೆಯ ವರದಿಗಾರರಿಗೆ ಆಗಾಗ ಸನ್ಮಾನಗಳು ನಡೆಯುತ್ತಲೇ ಇರುತ್ತವೆ. ಆದರೆ ಬೆಳಗಾವುದರೊಳಗೆ ಮನೆ-ಮನೆಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರನ್ನು ಗುರಿತಿಸಿ ಅವರನ್ನು ಸನ್ಮಾಸಿನುವುದು ಅಷ್ಟೇ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.
ಬೇರೆ ಕಾರ್ಮಿಕ ವರ್ಗದಂತೆ ಪತ್ರಿಕಾ ವಿತರರಿಗೂ ಎಲ್ಲ ಸೌಲಭ್ಯಗಳು ದೊರೆಯಬೇಕು ಎನ್ನುವ ದೃಷ್ಟಿಯಿಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೂ ಈ ಕುರಿತಾಗಿ ಮಾತುಕತೆ ನಡೆಸಿದ್ದು ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಅವರು ಕಲ್ಪಿಸಲಿದ್ದಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.