ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಯಾರೂ ಚರ್ಚೆ ಮಾಡುವುದು ಬೇಡ : ಡಿ.ಕೆ.ಶಿವಕುಮಾರ್

Update: 2024-12-07 10:15 GMT

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಸದ್ದು ಮಾಡುತ್ತಿದೆ. ಡಿಸಿಎಂ ಹೇಳಿಕೆ ಬಗ್ಗೆ ಮಾತನಾಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಯಾವ ಒಪ್ಪಂದವೂ ಆಗಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದರು. ಇತ್ತ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಡಿಕೆಶಿ ಹೇಳಿಕೆ ಸತ್ಯ ಎಂದು ಹೇಳಿದ್ದರು.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಒಪ್ಪಂದದ ವಿಚಾರವಾಗಿ ಯಾರೊಬ್ಬರು ಚರ್ಚೆ ಮಾಡಬಾರದು. ನಾವು ರಾಜಕೀಯವಾಗಿ ಕೆಲವು ಸಹಕಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ಅಧಿಕಾರ ಹಂಚಿಕೆ ಸೂತ್ರವೂ ಇಲ್ಲ ಏನೂ ಇಲ್ಲ. ಮುಖ್ಯಮಂತ್ರಿಗಳಿಗೆ ಕೆಲವು ಜವಾಬ್ದಾರಿ ವಹಿಸಿದ್ದು, ನನಗೆ ಕೆಲವು ಜವಾಬ್ದಾರಿ ವಹಿಸಿದ್ದಾರೆ. ನಾವು ನಮ್ಮ ಕೆಲಸ ಮಾಡುತ್ತಿದ್ದು, ಈ ಒಪ್ಪಂದ ಸೂತ್ರದ ಬಗ್ಗೆ ಯಾರೂ ಮಾತನಾಡುವ ಅವಶ್ಯಕತೆ ಹಾಗೂ ಸಂದರ್ಭವಿಲ್ಲ. ಸಿಎಂ ಹೇಳಿದ್ದೇ ಅಂತಿಮ ಎಂದು ನಾನು ಹೇಳಿದ್ದೇನೆ” ಎಂದು ತಿಳಿಸಿದರು.

ಕೆಲವು ದಿನಗಳ ಹಿಂದಷ್ಟೇ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದರು. ʼಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ನಮ್ಮ ನಡುವೆ ಕೆಲವು ಒಪ್ಪಂದವಾಗಿದೆ. ಅದನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲʼ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News