ರಾಜಕೀಯಕ್ಕಾಗಿ ತಂದೆ ಮಗಳನ್ನು ದೂರ ಮಾಡಿದ ಅಪವಾದ ಬೇಡ: ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುವ ಕುರಿತು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು: ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಯಸಿರುವ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಡಿ.ಕೆ. ಶಿವಕುಮಾರ್, ರಾಜಕೀಯಕ್ಕಾಗಿ ತಂದೆ ಹಾಗೂ ಮಗಳನ್ನು ದೂರ ಮಾಡಿದರು ಎಂಬ ಅಪವಾದ ಬೇಡ ಎಂದು ತಿಳಿಸಿದ್ದಾರೆ.
ರವಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿಶಾ ಯೋಗೇಶ್ವರ್ ನಮ್ಮ ಮನೆ ಮಗಳಂತೆ. ಆಕೆ ನಮ್ಮ ಬಳಿ ಬಂದು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ಅವರ ತಾಯಿ ನನಗೆ ಪರಿಚಯ. ಅವರಿಗೆ ರಕ್ಷಣೆ ಇಲ್ಲ. ತಂದೆ ಸ್ಥಾನದಲ್ಲಿ ನಿಂತು ನನ್ನನ್ನು ಸ್ವೀಕಾರ ಮಾಡಿ ಎಂದು ಕೇಳಿದಳು ಎಂದರು.
ರಾಜಕಾರಣಕ್ಕಾಗಿ ತಂದೆ-ಮಗಳ ಬೇರೆ ಮಾಡುವುದು ಸರಿಯಲ್ಲ. ಆಕೆಗೆ ಮದುವೆ ಮಾಡಬೇಕು, ಧಾರೆ ಎರೆದು ಅಕ್ಷತೆ ಹಾಕಬೇಕು. ಅದನ್ನು ತಂದೆಯೆ ಮಾಡಬೇಕು. ಹೀಗಾಗಿ ರಾಜಕೀಯಕ್ಕಾಗಿ ಅವರನ್ನು ಬೇರೆ ಮಾಡಲು ಇಷ್ಟವಿಲ್ಲ. ಆಕೆ ಬಂದು ತಮ್ಮ ಕಷ್ಟ ಹೇಳಿಕೊಂಡಿದ್ದಾಳೆ. ಆಕೆ ಪ್ರಬುದ್ಧ ಯುವತಿ. ಆಕೆಗೆ ರಾಜಕಾರಣದಲ್ಲಿನ ಆಯ್ಕೆಗೆ ಸ್ವಾತಂತ್ರ್ಯವಿದೆ. ಆಕೆ ಇನ್ನೂ ಯೋಗೇಶ್ವರ್ ಕುಟುಂಬದ ಮೇಲೆ ಅವಲಂಬಿತವಾಗಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ನಿಶಾ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ರಾಜಕೀಯಕ್ಕೆ ಅಪ್ಪ ಮಗಳನ್ನು ದೂರ ಮಾಡಿದರು ಎಂದು ಜನ ಪ್ರಶ್ನೆ ಮಾಡಬಹುದು. ಯೋಗೇಶ್ವರ್ ಜತೆ ಇರುವ ಬಿಜೆಪಿ ಕಾರ್ಯಕರ್ತರೆ ಆಕೆಗೆ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದಾರೆ. ಆಕೆ ವಿವಾಹವಾಗಿ ಬೇರೆ ಕುಟುಂಬಕ್ಕೆ ಸೇರಿದ್ದರೆ, ನಾವು ಇಷ್ಟು ಆಲೋಚನೆ ಮಾಡುತ್ತಿರಲಿಲ್ಲ. ಹೀಗಾಗಿ ನಾನು ನನ್ನ ಸಹೋದರ ಈ ವಿಚಾರವಾಗಿ ಬಹಳ ತಾಳ್ಮೆಯಿಂದ ಆಲೋಚನೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ನಿಶಾ ಮಾಧ್ಯಮಗಳಿಗೆ ಕೊಟ್ಟ ಹೇಳಿಕೆ ಗಮನಿಸಿದೆ. ಆಕೆ ದೊಡ್ಡ ಧೈರ್ಯ ಮಾಡಿರುವಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೆ ಕೆಲಸ ಮಾಡುತ್ತೇನೆ ಎಂದು ಆಕೆ ತೀರ್ಮಾನ ಮಾಡಿದರೆ, ಆಕೆಯನ್ನು ಹೊರದಬ್ಬಲು ಆಗುವುದಿಲ್ಲ. ಹೀಗಾಗಿ ಸ್ಥಳೀಯ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.