ಎಚ್‍ಡಿಕೆ ಚದುರಂಗದಾಟದಿಂದ ನಿಖಿಲ್‍ಗೆ ಟಿಕೆಟ್, ಇನ್ನು ಮುಂದೆ ಕಣ್ಣೀರಿನ ನಾಟಕ ಪ್ರಾರಂಭ : ಡಿ.ಕೆ.ಸುರೇಶ್
ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿಯವರ ಚದುರಂಗದಾಟದಿಂದ ನಿಖಿಲ್‍ಗೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಸಿಗುವಂತಾಗಿದ್ದು, ಇನ್ನೂ ಮುಂದೆ ಎಚ್‍ಡಿಕೆಯವರ ಕಣ್ಣೀರಿನ ನಾಟಕ ಪ್ರಾರಂಭವಾಗುತ್ತದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ.
ಶುಕ್ರವಾರ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿಯವರು 40 ವರ್ಷಗಳಿಂದ ಅವರ ದೃಷ್ಟಿಕೋನದಲ್ಲಿ ತಂತ್ರಗಾರಿಕೆ ಮಾಡಿಕೊಂಡು ಬಂದಿದ್ದಾರೆ. ಇದರ ಮುಂದುವರೆದ ಭಾಗವಿದು. ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದ್ದ ಸತ್ಯ ಎಂದರು
ಜೆಡಿಎಸ್ ಪಕ್ಷಕ್ಕೆ ಕುಮಾರಸ್ವಾಮಿ ಅವರೇ ಅಧಿನಾಯಕರು. ಎಲ್ಲವೂ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಲವಂತವಾಗಿ ಚುನಾವಣೆಗೆ ನಿಖಿಲ್ ಅವರನ್ನು ನಿಲ್ಲಿಸಲಾಗುತ್ತಿದೆ ಎನ್ನುವುದೆಲ್ಲಾ ಸುಳ್ಳು. ಈಗ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಮುಂದೆ ಅವರ ಕಣ್ಣೀರಿನ ನಾಟಕ ಪ್ರಾರಂಭವಾಗುತ್ತದೆ ಎಂದು ಡಿ.ಕೆ.ಸುರೇಶ್ ಹೇಳಿದರು.
ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದರಿಂದ ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರ ಮೇಲಿನ ಪ್ರೀತಿ ಎಷ್ಟಿದೆ ಎಂಬುದು ತಿಳಿಯುತ್ತದೆ. ಚುನಾವಣೆಯಲ್ಲಿ ಒಂದೊಂದು ಮತವೂ ಮುಖ್ಯ ಎಂದು ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಯಾರು ಪ್ರಭಾವಿಗಳು ಎನ್ನುವುದಕ್ಕಿಂತ, ನಾವು ಪಕ್ಷವನ್ನು ಗೆಲ್ಲಿಸಲು ಹೋರಾಟ ಮಾಡುತ್ತೇವೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.
ನಮ್ಮ ಸರಕಾರಕ್ಕೆ ಸಂಖ್ಯೆಯ ಅವಶ್ಯಕತೆಯಿಲ್ಲ. ಯಾರೇ ಪಕ್ಷಕ್ಕೂ ಬಂದರೂ ಸ್ವಾಗತ. ಈಗಾಗಲೇ ಅನೇಕರು ಪಕ್ಷ ಸೇರಿದ್ದಾರೆ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬಂದವರನ್ನು ಸೇರಿಸಿಕೊಳ್ಳಲಾಗುವುದು ಎಂದು ಡಿ.ಕೆ.ಸುರೇಶ್ ಹೇಳಿದರು.
ಶಿಗ್ಗಾವಿಯಲ್ಲಿ ಸೋತ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು ಹೊಂದಾಣಿಕೆ ರಾಜಕಾರಣವೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಸುರೇಶ್, ಈ ಪ್ರಶ್ನೆಯನ್ನು ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳನ್ನು ಕೇಳಬೇಕು. ನಮ್ಮಲ್ಲಿ ಯಾವುದೇ ಹೊಂದಾಣಿಕೆಯಿಲ್ಲ. ಸೋತ ಅಭ್ಯರ್ಥಿಗೆ ಟಿಕೆಟ್ ನೀಡಬಾರದು ಎನ್ನುವುದೇನಿಲ್ಲವಲ್ಲ. ನಾಲ್ಕೈದು ಬಾರಿ ಸೋತವರೇ ಮುಖ್ಯಮಂತ್ರಿಗಳಾದ ಉದಾಹರಣೆ ನಮ್ಮ ಮುಂದಿದೆ ಎಂದರು.
ಬೆಂಗಳೂರು ಗ್ರಾಮಾಂತರ ಬಿಟ್ಟ ಕ್ಷಣದಿಂದ ಸಂತೋಷವಾಗಿದ್ದೇನೆ. ಬೇರೆಯವರು ಅವರ ಆಸ್ತಿ ಎಂದು ತಿಳಿದುಕೊಂಡಿರುವಂತೆ, ಕ್ಷೇತ್ರ ನಮ್ಮ ಅಪ್ಪನ ಆಸ್ತಿಯಲ್ಲ. ಕೆಲಸ ಮಾಡಲು ಸಾರ್ವಜನಿಕರು ಕೊಟ್ಟಿರುವ ಕೊಡುಗೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ಬೇಡ ಎಂದು ಹೇಳಿದ್ದಾರೆ, ಅದನ್ನು ಮುಕ್ತ ಕಂಠದಿಂದ ಸ್ವಾಗತ ಮಾಡಿದ್ದೇನೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.