ಬಿಜೆಪಿಯವರಿಗೆ ಪ್ರಾಣ ಪ್ರತಿಷ್ಠಾಪನೆಯ ಅರ್ಥ ಗೊತ್ತಿದೆಯೇ?: ಸಚಿವ ಪ್ರಿಯಾಂಕ್ ಖರ್ಗೆ

Update: 2024-01-17 13:08 GMT

ಬೆಂಗಳೂರು: ಬಿಜೆಪಿ ನಾಯಕರು ಮಾತೆತ್ತಿದರೆ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನೇರವಾಗಿ ಸವಾಲು ಹಾಕುತ್ತೇನೆ. ಪ್ರಾಣ ಪ್ರತಿಷ್ಠಾಪನೆಯ ಅರ್ಥ ಏನು ಎಂದು ನೀವು ಕೇಳಿ. ಯಾವೊಬ್ಬ ಬಿಜೆಪಿ ನಾಯಕನಿಗೂ ಈ ಬಗ್ಗೆ ಗೊತ್ತಿರುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ದೇವಾಲಯದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವಾಗ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಾಧು ಸಂತರು, ಪೂಜಾರಿಗಳು, ಸ್ವಾಮೀಜಿಗಳು ಬಂದು ದೇವರನ್ನು ಆ ಗರ್ಭಗುಡಿಗೆ ಆಹ್ವಾನಿಸಿ ಕಲ್ಲಿನ ಮೂರ್ತಿಗೆ ಜೀವ ತುಂಬುವುದನ್ನು ಪ್ರಾಣ ಪ್ರತಿಷ್ಠಾಪನೆ ಎನ್ನುತ್ತಾರೆ ಎಂದರು.

ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ನಮ್ಮ ಜತೆ ಚರ್ಚೆಗೆ ಸವಾಲು ಹಾಕಿದ್ದಾರಲ್ಲ. ಅವರು ದೇಶದ ನಾಲ್ವರು ಶಂಕರಾಚಾರ್ಯರ ಜತೆ ಚರ್ಚೆಗೆ ಹೋಗಲಿ. ಪ್ರಾಣ ಪ್ರತಿಷ್ಠಾಪನೆ ಮಾಡಬೇಕಾದವರು ನಾವು, ಆದರೆ ಪ್ರಧಾನಮಂತ್ರಿ ಯಾಕೆ ಮಾಡುತ್ತಿದ್ದಾರೆ? ನಾವೇನು ಚಪ್ಪಾಳೆ ಹೊಡೆಯಲು ಇದ್ದೇವಾ? ಪ್ರತಿಷ್ಠಾಪನೆ ಜ.22ರಂದೇ ಏಕೆ? ರಾಮನವಮಿ ದಿನ ಯಾಕೆ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಚರ್ಚೆಗೆ ಹೋಗಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ನಮ್ಮ ಹಿಂದೂ ಧರ್ಮದ ವಿಧಿ ವಿಧಾನಗಳ ಮೂಲಕ ಪ್ರತಿಷ್ಠಾಪನೆ ಮಾಡುತ್ತಿಲ್ಲ ಯಾಕೆ? ಪ್ರಾಣ ಪ್ರತಿಷ್ಠಾಪನೆಯಾಗಬೇಕಾದರೆ ಆ ಮಂದಿರ ನಿರ್ಮಾಣ ಪೂರ್ಣಗೊಳ್ಳಬೇಕು. ರಾಮಮಂದಿರ ಪೂರ್ಣಗೊಳ್ಳದೆ ಆತುರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವುದೇಕೆ? ನೀವು ಕಾಂಗ್ರೆಸ್ ನಾಯಕರನ್ನು ಹಿಂದೂ ವಿರೋಧಿ ಎಂದು ಹೇಳುತ್ತೀರಾ. ಹೀಗಾಗಿ ಈ ಶಂಕರಾಚಾರ್ಯರ ಪ್ರಶ್ನೆಗಳಿಗಾದರೂ ಉತ್ತರ ನೀಡಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಅನಂತಕುಮಾರ್ ಹೆಗಡೆ ಕಳೆದ ನಾಲ್ಕೂವರೆ ವರ್ಷ ಎಲ್ಲಿದ್ದರು?. ಕೌಶಲ್ಯಭಿವೃದ್ಧಿ, ಉದ್ಯಮ ಇಲಾಖೆ ಸಚಿವರಾಗಿದ್ದ ಅವರು, ನಮ್ಮ ರಾಜ್ಯದಲ್ಲಿ ಬೇಡ, ಅವರು ಪ್ರತಿನಿಧಿಸುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕೊಡಿಸಿದ್ದಾರೆ ಎಂಬುದನ್ನು ಹೇಳಲಿ ಎಂದು ಅವರು ಆಗ್ರಹಿಸಿದರು.

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಏನು ತಂದಿದ್ದಾರೆ? ಬರ ಸೇರಿದಂತೆ ರಾಜ್ಯದ ವಿಚಾರವಾಗಿ ಎಂದಾದರೂ ಧ್ವನಿ ಎತ್ತಿದ್ದಾರಾ? ಸಂಸತ್ತಿನಲ್ಲಿ ಎಂದಾದರೂ ರಾಜ್ಯದ ವಿಚಾರವಾಗಿ ಮಾತನಾಡಿದ್ದಾರಾ? ಪರೇಶ್ ಮೇಸ್ತಾ ಪ್ರಕರಣ ಏನಾಯ್ತು? ಆತನ ಹೆಸರು ಹೇಳಿಕೊಂಡೆ ಅವರು ಚುನಾವಣೆ ಗೆದ್ದಿದ್ದು ಅಲ್ಲವೇ? ಆಗ ಆತನ ಹೆಸರು ಹೇಳುತ್ತಿಲ್ಲ ಯಾಕೆ? ಇಂತಹವರನ್ನು ರಾಮಭಕ್ತರು ಎಂದು ಹೇಳುತ್ತೀರಾ? ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಬಿಜೆಪಿಯವರಿಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ನಮ್ಮ ಹೆಸರನ್ನು ದಿನಕ್ಕೆರಡು ಬಾರಿ ಹೇಳದಿದ್ದರೆ ಅವರು ತಿಂದ ಊಟ ಜೀರ್ಣವೂ ಆಗಲ್ಲ, ರಾತ್ರಿ ನಿದ್ದೆಯೂ ಬರಲ್ಲ. ಕೆಲವು ನಾಯಕರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂದರೆ ತಮ್ಮ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಟೀಕೆ ಮಾಡಬೇಕಿದೆ ಎಂದು ಅವರು ವ್ಯಂಗ್ಯವಾಡಿದರು.

ಬಿಜೆಪಿ ನಾಯಕರ ಮಕ್ಕಳು ಯಾಕೆ ಧರ್ಮ ರಕ್ಷಣೆ, ಗೋರಕ್ಷಣೆಗೆ ಹೋಗಲ್ಲ?:

ನೀವು ಯಾವುದೆ ಬಿಜೆಪಿ ನಾಯಕರಿಗಾದರೂ ಕೇಳಿ. ಅವರಿಗೆ ನಾಲ್ಕು ಸಾಲು ಹನುಮಾನ್ ಚಾಲೀಸ ಬರುವುದಿಲ್ಲ. ಅವರು ಭಗವದ್ಗೀತೆ ಓದಿಲ್ಲ. ರಾಮಾಯಣ ಓದಿಲ್ಲ. ದೇವರ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇವರ ಮಕ್ಕಳು ಯಾಕೆ ಧರ್ಮ ರಕ್ಷಣೆಗೆ ಹೋಗುತ್ತಿಲ್ಲ. ಇವರ ಮಕ್ಕಳ ಮೇಲೆ ಕೇಸರಿ ಶಾಲು ಯಾಕೆ ಇಲ್ಲ? ಇವರ ಮಕ್ಕಳು ಎಷ್ಟು ಜನ ಗೋಶಾಲೆಯಲ್ಲಿದ್ದಾರೆ? ಬಿಜೆಪಿ ಶಾಸಕರು ಮತ್ತು ಮಂತ್ರಿಗಳ ಪೈಕಿ ಎಷ್ಟು ಜನ ಗೋಮೂತ್ರ ಕುಡಿಯುತ್ತಾರೆ ಎಂದು ಪಟ್ಟಿ ನೀಡಿ ಎಂದು ಅವರು ಕೇಳಿದರು.

ಹೆಚ್ಚು ಸ್ಥಾನ ಗೆಲ್ಲುವುದಷ್ಟೇ ನಮ್ಮ ಗುರಿ:

ನಮ್ಮ ಸಂಪೂರ್ಣವಾದ ಜವಾಬ್ದಾರಿ ಹಾಗೂ ಲಕ್ಷ್ಯ ಹೆಚ್ಚಿನ ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವುದು. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ ಎಂದ ಅವರು, ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡುವ ವಿಚಾರದ ಕುರಿತು ಅವರನ್ನೆ ಕೇಳಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News