ಒಮ್ನಿ ವಾಹನಗಳ ಬಗ್ಗೆ ಕಥೆ ಕಟ್ಟಬೇಡಿ: ಶಿವಮೊಗ್ಗ ಎಸ್ಪಿ ಸ್ಪಷ್ಟನೆ
ಶಿವಮೊಗ್ಗ: ನಗರದ ರಾಗಿಗುಡ್ಡದಲ್ಲಿ ಮಿಲಾದುನ್ನಬಿ ಮೆರವಣಿಗೆ ವೇಳೆ ಒಮ್ನಿ ವಾಹನಗಳಲ್ಲಿ ಬಂದು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಇದೀಗ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಗಿಗುಡ್ಡದ ದೇವಸ್ಥಾನದ ಬಳಿ ಎರಡು ಒಮಿನಿ ವಾಹನಗಳು ಬಂದು ನಿಂತಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಕಂಡಿದ್ದು ಅನುಮಾನಗಳಿಗೆ ಕಾರಣವಾಗಿತ್ತು. ಈ ಬಗ್ಗೆ ಟಿವಿ ಚಾನಲ್ ಗಳಲ್ಲೂ ಸುದ್ದಿ ಪ್ರಸಾರವಾಗಿದ್ದವು.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್, ʼʼಒಮ್ನಿ ವಾಹನದಲ್ಲಿ ಬಂದವರು ದಾವಣಗೆರೆ ಜಿಲ್ಲೆ ನ್ಯಾಮತಿಯವರು. ವಾಹನದಲ್ಲಿ ಮುಸ್ಲಿಮರು ಮಾತ್ರವಲ್ಲ ಹಿಂದೂಗಳು ಇದ್ದರು. ಎಲ್ಲರೂ ಸ್ನೇಹಿತರು. ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ನೋಡಲು ಬಂದವರು ರಾಗಿಗುಡ್ಡಕ್ಕೂ ಬಂದಿದ್ದಾರೆ. ಅಲ್ಲಿ ಗಲಾಟೆ ಆರಂಭವಾಗುತ್ತಿದ್ದಂತೆಯೇ ಅವರೆಲ್ಲರೂ ತಮ್ಮೂರಿಗೆ ಮರಳಿದ್ದಾರೆ. ದಯವಿಟ್ಟು ಸತ್ಯವನ್ನು ಪರಿಶೀಲಿಸದೆ ಕಥೆಗಳನ್ನು ಕಟ್ಟಬೇಡಿ. ಎಲ್ಲಾ ಕೋನಗಳಿಂದ ತನಿಖೆ ನಡೆಯುತ್ತಿದೆʼʼ ಎಂದು ಸ್ಪಷ್ಟಪಡಿಸಿದರು.