ಕೋವಿಡ್‌ ಹಗರಣ | ನಾನು ಟಾಸ್ಕ್ ಫೋರ್ಸ್ ಮುಖ್ಯಸ್ಥನಾಗಿರಲಿಲ್ಲ : ಡಾ.ಸಿ.ಎನ್‌.ಮಂಜುನಾಥ್‌ ಸ್ಪಷ್ಟನೆ

Update: 2024-11-16 10:40 GMT

ಡಾ.ಸಿ.ಎನ್‌.ಮಂಜುನಾಥ್‌

ಬೆಂಗಳೂರು : "ಕೊವೀಡ್ ನಿರ್ವಹಣೆ ವಿಚಾರದಲ್ಲಿ ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ನನ್ನ‌ ಹೆಸರು ಪ್ರಸ್ತಾಪವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ನಾನು ಕೊವೀಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥನಾಗಿರಲಿಲ್ಲ" ಎಂದು ಬಿಜೆಪಿ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಸಾಮಾಜಿಕ ಜಾಲತಾಣ x ನಲ್ಲಿ ಬರೆದುಕೊಂಡಿರುವ ಅವರು,"ಕೊವೀಡ್ ಟಾಸ್ಕ್ ಫೋರ್ಸ್ ನಲ್ಲಿ ಕೇವಲ ಸಮಿತಿಯ ಸದಸ್ಯನಾಗಿ ಅನೇಕ ತಜ್ಞರು, ವೈದ್ಯರು, ಸರಕಾರಿ ಅಧಿಕಾರಿಗಳ ಜೊತೆ ಸೇರಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕೊವೀಡ್ ನಿಯಂತ್ರಣದ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡುವುದಷ್ಟೇ ನನ್ನ ಜವಾಬ್ದಾರಿ ಆಗಿತ್ತು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಹಣಕಾಸಿನ ಜವಾಬ್ದಾರಿಯಾಗಲಿ, ನಿಯಂತ್ರಣವಾಗಲಿ ನನ್ನ ವ್ಯಾಪ್ತಿಗೆ ಬರುತ್ತಿರಲಿಲ್ಲ" ಎಂದು ತಿಳಿಸಿದ್ದಾರೆ.

ʼಸಚಿವ ಸಂಪುಟದ ಮಾರ್ಗದರ್ಶನದಲ್ಲಿ ಕೊವೀಡ್ ನಿರ್ವಹಣೆ ನಡೆಯುತ್ತಿತ್ತು. ಆದರೂ ಕೆಲವು ಸಾಮಾಜಿಕ ಜಾಲತಾಣದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಉಲ್ಲೇಖಿಸಲಾಗುತ್ತಿರುವುದು ನನಗೆ ನೋವು ತರಿಸಿದೆʼ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭ ಕೋವಿಡ್-19 ಸೋಂಕಿನ ಚಿಕಿತ್ಸೆಯ ಹೆಸರಿನಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದ ಆಯೋಗವು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ವಿರುದ್ಧ ತನಿಖೆಗೆ ಶಿಫಾರಸ್ಸು ಮಾಡಿದೆ. ಅಲ್ಲದೆ, ಈ ಸಂಬಂಧ ಅಕ್ರಮ ನಡೆದಿರುವ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್‍ಐಟಿ)ರಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಮಧ್ಯೆ ಕೋವಿಡ್ ಸಂದರ್ಭದಲ್ಲಿ ಡಾ.ಸಿ.ಎನ್.ಮಂಜುನಾಥ್ ಟಾಸ್ಕ್ ಫೋರ್ಸ್ ಕಮಿಟಿ ಮುಖ್ಯಸ್ಥರಾಗಿದ್ದರು. ಟಾಸ್ಕ್ ಫೋರ್ಸ್ ನಿರ್ಣಯದಂತೆ ಕೆಲ ಉಪಕರಣಗಳ ಖರೀದಿ ಆಗಿದೆ. ಈ ಹಿನ್ನೆಲೆ ಟಾಸ್ಕ್ ಫೋರ್ಸ್ ಬಗ್ಗೆಯೂ ಕುನ್ಹಾ ವರದಿಯಲ್ಲಿ ಪ್ರಸ್ತಾಪವಾಗಿದೆ. ಇದು ಮಂಜುನಾಥ್ ಅವರಿಗೆ ಸಂಕಷ್ಟ ತಂದಿಟ್ಟಿದೆ ಎಂದು ವರದಿಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News