ಬರ ಪರಿಹಾರ | ಪರಾಮರ್ಶನ ಸಭೆ ನಡೆಸಲು ನೀತಿ ಸಂಹಿತೆ ಸಡಿಸಲಿಸಿದ ಚುನಾವಣಾ ಆಯೋಗ

Update: 2024-05-18 15:18 GMT

ಬೆಂಗಳೂರು : ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಂಪುಟದ ಎಲ್ಲ ಸಚಿವರು ಬರ, ಪ್ರವಾಹ ಪರಿಹಾರ ಕ್ರಮಗಳ ಬಗ್ಗೆ ಪರಾಮರ್ಶನ ಸಭೆ ನಡೆಸಲು ಭಾರತೀಯ ಚುನಾವಣಾ ಆಯೋಗವು ಶರತ್ತುಬದ್ಧವಾಗಿ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಸಡಿಲಿಸಿದೆ.

ರಾಜ್ಯದಲ್ಲಿನ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಈ ತಾಲೂಕುಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಬರ ಪರಿಹಾರ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಜಿಲ್ಲಾಧಿಕಾರಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರ ಜೊತೆ ವಿಡಿಯೋ ಕಾನ್ಫರೆನ್ಸ್, ಪರಿಶೀಲನಾ ಸಭೆಗಳನ್ನು ನಡೆಸಬೇಕಿದೆ. ಆದುದರಿಂದ, ಮಾದರಿ ನೀತಿ ಸಂಹಿತೆಯನ್ನು ಸಡಿಲಗೊಳಿಸುವಂತೆ ರಾಜ್ಯ ಸರಕಾರ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿತ್ತು.

ಅದೇ ರೀತಿ, ಸರಕಾರದ ವಿವಿಧ ನಿಗಮಗಳು, ಮಂಡಳಿಗಳು, ಸಮಿತಿಗಳು ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಇತರೆ ಶಾಸನಾತ್ಮಕ ಸಂಸ್ಥೆಗಳಲ್ಲಿ ಸಭೆಗಳನ್ನು ನಡೆಸಲು ಸಕ್ಷಮ ಪ್ರಾಧಿಕಾರಗಳು ಚುನಾವಣಾ ಆಯೋಗದ ನಿರ್ಣಯದಲ್ಲಿನ ಷರತ್ತಿಗೊಳಪಟ್ಟು ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಮೂಲಭೂತ ಸೌಲಭ್ಯ ಕಾಮಗಾರಿಗಳು ಮತ್ತು ಸರಕು ಸೇವೆಗಳ ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಗಳನ್ನು ಆಹ್ವಾನಿಸುವುದು, ಟೆಂಡರ್ ಗಳನ್ನು ಅಂತಿಮಗೊಳಿಸುವುದು ಹಾಗೂ ಕಾರ್ಯಾದೇಶಗಳನ್ನು ನೀಡುವ ಕುರಿತ ಪ್ರಸ್ತಾವನೆಗಳಿಗೆ ಸಕ್ಷಮ ಪ್ರಾಧಿಕಾರಿಗಳು ಚುನಾವಣಾ ಆಯೋಗದ ನಿರ್ಣಯದಲ್ಲಿನ ಷರತ್ತಿಗೊಳಪಟ್ಟು ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News