ದಸರಾ ಯಾವುದೇ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾದ ವೈಭವ ಅಲ್ಲ: ಸಿಎಂ ಸಿದ್ದರಾಮಯ್ಯ

Update: 2024-10-04 16:41 GMT

Photo: X/@CMofKarnataka

ಬೆಂಗಳೂರು: ದಸರಾ ಯಾವುದೇ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾದ ವೈಭವ ಅಲ್ಲ. ಇದು ಸರ್ವ ಜನಾಂಗದ ಸಂಭ್ರಮದ ಹಬ್ಬ. ಇದು ಸಾಂಸ್ಕೃತಿಕ ಹಿರಿಮೆ ಮತ್ತು ಚರಿತ್ರೆಯನ್ನು ಸಾರುವ ಹಬ್ಬ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶುಕ್ರವಾರ ಸಿಂಧನೂರಿನಲ್ಲಿ ‘ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ್ದ ವೈಭವದ ಸಿಂಧನೂರು ದಸರಾ ಉತ್ಸವ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಅಂಬಾದೇವಿ ಮತ್ತು ಚಾಮುಂಡಿ ತಾಯಿಯ ಕೃಪೆಯಿಂದ ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿದೆ. ಜಲಾಶಯ, ಕೆರೆ ಕಟ್ಟೆಗಳು ತುಂಬಿವೆ. ಹೀಗಾಗಿ ಈ ಬಾರಿ ಸಮೃದ್ಧಿ ಕಾಣಲಿದ್ದೇವೆ ಎನ್ನುವ ನಂಬಿಕೆ ನನಗಿದೆ ಎಂದರು.

371 ಜೆ ಜಾರಿಗಾಗಿ ಕಲ್ಯಾಣ ಕರ್ನಾಟಕದ ಎಲ್ಲ ಜಾತಿ, ಧರ್ಮದ ಮಂದಿ ಒಟ್ಟಾಗಿ ಹೋರಾಟ ನಡೆಸಿದರು. ಈ ಜನ ಹೋರಾಟದ ಬೆನ್ನಿಗೆ ನಿಂತು ಮಲ್ಲಿಕಾರ್ಜುನ ಖರ್ಗೆ ಅವರು 371 ಜೆ ಜಾರಿ ಮಾಡಿಸಿದರು. 371 ಜೆ ಜಾರಿಯಾಗಿ ದಶಮಾನೋತ್ಸವ ಪ್ರಯುಕ್ತ ನಾವು ಕಲ್ಬುರ್ಗಿಯಲ್ಲಿ ವಿಶೇಷ ಕ್ಯಾಬಿನೆಟ್ ನಡೆಸಿ ಅದೊಂದೇ ದಿನ 11,770 ಕೋಟಿ ರೂ. ಯೋಜನೆಗಳಿಗೆ ಮಂಜೂರಾತಿ ನೀಡಿದ್ದೇವೆ ಎಂದು ತಿಳಿಸಿದರು.

ಕಲ್ಯಾಣ ಕರ್ನಟಕದಲ್ಲಿ ಖಾಲಿ ಇದ್ದ 1,09,000 ಹುದ್ದೆಗಳಲ್ಲಿ 79,000 ಹುದ್ದೆ ಭರ್ತಿ ಮಾಡಿದ್ದೇವೆ. ಉಳಿದದ್ದನ್ನು ಭರ್ತಿ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದ ಸಿಎಂ ಸಿದ್ದರಾಮಯ್ಯ, ಇದೆಲ್ಲಾ ಸಾಧ್ಯವಾಗಿದ್ದು 371 ಜೆ ಯಿಂದ. ಇದನ್ನು ಜಾರಿಗೆ ಸಹಕರಿಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ನಾವೆಲ್ಲಾ ಸ್ಮರಿಸಬೇಕು ಎಂದರು.

ಗ್ಯಾರಂಟಿಗಳಿಂದಾಗಿ ಬೇರೆ ಅಭಿವೃದ್ಧಿಗೆ ಹಣ ಇಲ್ಲ, ಹಣ ಇಲ್ಲ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದ್ದಾರೆ. ಹಾಗಾದರೆ ಈಗ ಉದ್ಘಾಟಿಸಿದ 1695 ಕೋಟಿ ರೂ. ಹಣ ಎಲ್ಲಿಂದ ಬಂತು? ಒಂದೇ ವಿಶೇಷ ಕ್ಯಾಬಿನೆಟ್‍ನಲ್ಲಿ 11,770 ಕೋಟಿ ರೂ. ಕಾಮಗಾರಿಗೆ ಅನುಮೋದನೆ ಕೊಟ್ವಲ್ಲಾ, ಇದೆಲ್ಲಾ ಹೇಗಾಯ್ತು ಹೇಳ್ರಪಾ ಎಂದು ವ್ಯಂಗ್ಯವಾಗಿ ಬಿಜೆಪಿಯನ್ನು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 371 ಜೆ ಜಾರಿಗೆ ಆಗ್ರಹಿಸಿ ಹೋರಾಟ ಸಂಘಟಿಸಿದ ಎಲ್ಲಾ ಜಾತಿ, ಧರ್ಮಗಳ ಹಿರಿಯ ಹೋರಾಟಗಾರರನ್ನು ಸನ್ಮಾನಿಸಲಾಯಿತು.

ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್, ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬೋಸರಾಜು ಸೇರಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮುಖಂಡರುಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News