ದಸರಾ ಪ್ರಯುಕ್ತ 2000ಕ್ಕೂ ಅಧಿಕ ಬಸ್‍ಗಳ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಿದ ಕೆಎಸ್ಸಾರ್ಟಿಸಿ

Update: 2024-10-04 18:24 GMT

ಬೆಂಗಳೂರು: ದಸರಾ ಮಹೋತ್ಸವದ ಅಂಗವಾಗಿ ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ 2000ಕ್ಕೂ ಅಧಿಕ ಬಸ್‍ಗಳ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಿದೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅ.9ರಿಂದ ಅ.14ರವರೆಗೆ ಬೆಂಗಳೂರಿನಿಂದ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಗೆ 2000ಕ್ಕೂ ಹೆಚ್ಚು ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ವಾಹನಗಳನ್ನು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಆಚರಣೆ ಮಾಡಲಾಗುವುದು.

ರಾಜ್ಯದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್‍ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು.

660 ವಿಶೇಷ ಪ್ಯಾಕೇಜ್ ವ್ಯವಸ್ಥೆ: ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 260ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಹಾಗೂ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಕೆ.ಆರ್.ಎಸ್.ಅಣೆಕಟ್ಟು/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ಮಡಿಕೇರಿ, ಮಂಡ್ಯ, ಮಳವಳ್ಳಿ, ಹೆಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕಕಲ್ಪಿಸಲು 400 ಹೆಚ್ಚುವರಿ ವಾಹನಗಳು ಸೇರಿ ಒಟ್ಟಾರೆ 660 ದಸರಾ ವಿಶೇಷ ವಾಹನಗಳನ್ನು ಕಾರ್ಯಾಚರಿಸಲು ಯೋಜಿಸಲಾಗಿದೆ.

ಇನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ‘ಫ್ಲೈ ಬಸ್’ ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ.

ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ಸಾರಿಗೆ ವಾಹನಗಳಿಂದ ಒಂದು ದಿನದ ವಿಶೇಷ ಪ್ರವಾಸ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು. ಈ ಪ್ಯಾಕೇಜ್‍ಗಳು ಅ.3ರಿಂದ ಅ.15ರ ಇರಲಿವೆ.

ಗಿರಿದರ್ಶಿನಿ ಹೆಸರಿನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.(ಪ್ರಯಾಣದರ ವಯಸ್ಕರಿಗೆ 400 ರೂ., ಮಕ್ಕಳಿಗೆ 250 ರೂ.)

ಜಲದರ್ಶಿನಿ ಹೆಸರಿನಲ್ಲಿ ಗೋಲ್ಡನ್‍ಟೆಂಪಲ್(ಬೈಲಕುಪ್ಪೆ), ದುಬಾರೆಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್.ಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.(ಪ್ರಯಾಣದರ ವಯಸ್ಕರಿಗೆ 450 ರೂ. ಮಕ್ಕಳಿಗೆ 300ರೂ.)

ದೇವದರ್ಶಿನಿ ಹೆಸರಿನಲ್ಲಿ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.(ಪ್ರಯಾಣದರ ವಯಸ್ಕರಿಗೆ 300 ರೂ. ಮಕ್ಕಳಿಗೆ 200 ರೂ.)

ಪ್ಯಾಕೇಜ್ ಸಾರಿಗೆಗಳು ಬೆಳಿಗ್ಗೆ ಮೈಸೂರಿನಿಂದ ಹೊರಟು ಮೇಲ್ಕಂಡ ವಿವಿಧ ಸ್ಥಳಗಳನ್ನು ಸಂದರ್ಶಿಸಿದ ನಂತರ ಸಾಯಂಕಾಲ ಮೈಸೂರಿಗೆ ವಾಪಸ್ಸಾಗುತ್ತವೆ. ಇ-ಟಿಕೇಟ್ ಬುಕಿಂಗ್‍ನ್ನುತಿತಿತಿ.ಞsಡಿಣಛಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News