ನಾಗಮಂಗಲ ಕೋಮುಗಲಭೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಜಾಗೊಳಿಸಿ: ಎಸ್. ಬಾಲನ್

Update: 2024-10-04 18:41 GMT

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸೆ.11ರಂದು ಗಣೇಶ ವಿಸರ್ಜನೆ ನೆಪದಲ್ಲಿ ಉಂಟಾದ ಕೋಮುಗಲಭೆಯನ್ನು ಪರಿಶೀಲಿಸಿಲು ಆಲ್ ಇಂಡಿಯಾ ಪ್ರಾಕ್ಟೀಸಿಂಗ್ ಲಾಯರ್ಸ್ ರಾಜ್ಯ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿಯ ಸಮಗ್ರ ವರದಿಯನ್ನು ತಯಾರಿಸಿ ಬಿಡುಗಡೆ ಮಾಡಿದೆ.

ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲ ಎಸ್.ಬಾಲನ್ ಸತ್ಯಶೋಧನ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ನಾಗಮಂಗಲ ಕೋಮುಗಲಭೆಯನ್ನು ಹತೋಟಿಗೆ ತರುವುದರಲ್ಲಿ ವಿಫಲರಾಗಿರುವ ಮತ್ತು ಕರ್ತವ್ಯ ಲೋಪ ಎಸಗಿದ ಎಲ್ಲ ಅಧಿಕಾರಿಗಳನ್ನು ಕೂಡಲೆ ಕೆಲಸದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಜನತೆಯ ಮುಂದೆ ಘಟನೆಯನ್ನು ಸ್ಪಷ್ಟಪಡಿಸಿ ಸರಕಾರಕ್ಕೆ ವರದಿಯನ್ನು ಸಲ್ಲಿಸಲು ಮತ್ತು ಗಲಭೆ ಪೀಡಿತ ಪ್ರದೇಶ ಮತ್ತು ಅನ್ಯಾಯಕ್ಕೆ ಒಳಗಾದ ಜನತೆಗೆ ನ್ಯಾಯ ಒದಗಿಸಲು ಹಾಗೂ ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಲು ಗಲಭೆಯ ಕುರಿತು ಸಂಪೂರ್ಣ ನ್ಯಾಯಂಗ ತನಿಖೆ ಆಗಬೇಕು. ಆಸ್ತಿಪಾಸ್ತಿ ನಷ್ಟಗೊಂಡವರಿಗೆ ಆದ್ಯತೆಯ ಮೇರೆಗೆ ಪರಿಹಾರ ಒದಗಿಸಬೇಕು ಎಂದು ಬಾಲನ್ ಮನವಿ ಮಾಡಿದರು.

ಈ ಹಿಂದೆಯೂ ನಾಗಮಂಗಲದಲ್ಲಿ ಗಣೇಶ ಹಬ್ಬದ ದಿನ ಕೋಮುಗಲಭೆಯಂತಹ ಪರಿಸ್ಥಿತಿ ಉಂಟಾಗಿತ್ತು. ಆದ್ದರಿಂದ ನಾಗಮಂಗಲ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಹೆಚ್ಚಿನ ಪ್ರಮಾಣದ ಬಂದೋಬಸ್ತ್ ಮತ್ತು ನಾಕ ಬಂದಿ ಒಗಿಸಬೇಕು. ತಿಂಗಳಿಗೊಮ್ಮೆ ಉನ್ನತ ಮಟ್ಟದ ನಾಯಕರು ರಾಜಕೀಯ ಮುಖಂಡರು ಸಾಮಝಿಕ ಸಂಘಟನೆಗಳ ನಾಯಕರ ವಿಶೇಷ ಸಭೆ ಆಯೋಜಿಸಬೇಕು. ಎಲ್ಲ ವ್ಯಾಪ್ತಿಗಳಲ್ಲಿ ಸಿಸಿ ಟಿವಿ ಮತ್ತು ರಾತ್ರಿ ವೇಳೆ ರಸ್ತೆ ದೀಪಗಳನ್ನು ಎಲ್ಲ ಕಡೆ ಅಳವಡಿಸಬೇಕು ಎಂದು ಅವರು ಸಲಹೆ ನೀಡಿದರು.

ಗಲಭೆಗೆ ಸಂಬಂಧಪಡದೆ ಇರುವ ಅಮಾಯಕರನ್ನು ಆದಷ್ಟು ಬೇಗ ಬಿಡುಗಡೆಗೊಳಿಸಬೇಕು. ಮುಖ್ಯಮಂತ್ರಿಗಳು ನಾಗಮಂಗಲಕ್ಕೆ ಖುದ್ದು ಭೇಟಿ ನೀಡಿ ಸಂತ್ರಸ್ತರ ಅಹವಾಲನ್ನು ಸ್ವೀಕರಿಸಬೇಕು. ಮುಂದಿನ ದಿನಗಳಲ್ಲಿ ಯಾವುದೆ ಅಹಿತಕರ ಘಟನೆ ಆಗದಂತೆ ಮುನ್ನಚ್ಚರಿಕೆ ಪಾಲಿಸಿಕೊಂಡು ಶಾಂತಿ, ಸೌಹಾರ್ದತೆಗೆ, ಒತ್ತು ನೀಡುವ ಕೆಲಸ ಮಾಡಬೇಕು ಎಂದು ಬಾಲನ್ ಆಗ್ರಹಿಸಿದರು.

ಅಖಿಲ ಭಾರತ ಪ್ರಾಕ್ಟೀಸಿಂಗ್ ಲಾಯರ್ಸ್ ಕೌನ್ಸಿಲ್ ಉಪಾಧ್ಯಕ್ಷ ಜಯರಾಮ್ ಎನ್.ಕೆ., ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಖಾರ್ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News