ವಾಲ್ಮೀಕಿ ಹಗರಣ | ಜಾಮೀನು ರದ್ದು ಕೋರಿ ಈಡಿ ಅರ್ಜಿ : ಆರೋಪಿ ನಾಗೇಂದ್ರಗೆ ಹೈಕೋರ್ಟ್ ತುರ್ತು ನೋಟಿಸ್

Update: 2024-10-24 15:31 GMT

ಬಿ.ನಾಗೇಂದ್ರ

ಬೆಂಗಳೂರು : ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ 95 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಜಾಮೀನು ರದ್ದುಪಡಿಸುವಂತೆ ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ನಾಗೇಂದ್ರ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ನಾಗೇಂದ್ರ ಅವರ ಜಾಮೀನು ರದ್ದುಪಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯ (ಈಡಿ) ಸಲ್ಲಿಸಿರುವ ಅರ್ಜಿಯನ್ನು ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಈಡಿ ಪರ ಖುದ್ದು ಹಾಜರಾಗಿದ್ದ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು, ‘ಈ ಪ್ರಕರಣದಲ್ಲಿ ನಾಗೇಂದ್ರ ಅವರು ಬಹುಕೋಟಿ ಮೊತ್ತವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಮತ್ತು ಈ ಕುರಿತಂತೆ ಈಡಿ ಸಾಕಷ್ಟು ಸಾಕ್ಷ್ಯಗಳನ್ನು ತನಿಖೆಯ ವೇಳೆ ಪತ್ತೆ ಮಾಡಿದೆ. ಹಣ ಅಕ್ರಮ ವರ್ಗಾವಣೆ ಕಾಯ್ದೆ-2002ರ (ಪಿಎಂಎಲ್ಎ) ಕಲಂ 45ರ ಅನುಸಾರ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ. ಹಾಗಾಗಿ, ನಾಗೇಂದ್ರ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿರುವ ಜಾಮೀನು ಆದೇಶವನ್ನು ರದ್ದುಪಡಿಸಬೇಕುʼ ಎಂದು ಕೋರಿದರು. ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ನ.15ಕ್ಕೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News