ಸಿಎಂ ಸಿದ್ದರಾಮಯ್ಯರಿಂದ ಶಿಕ್ಷಣ ಕ್ಷೇತ್ರ ಕಲುಷಿತಗೊಳಿಸುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

Update: 2023-12-23 06:35 GMT

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಹಿಜಾಬ್ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಮತ್ತೆ ಹಿಜಾಬ್‍ಗೆ ಅವಕಾಶ ಮಾಡಿಕೊಡುವುದಾಗಿ ಹೇಳುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಕೈಹಾಕಿರುವುದು ಈ ನಾಡಿನ ಒಂದು ದುರದೃಷ್ಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.

ಶನಿವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ʼಒಂದೆಡೆ ಹಿಜಾಬ್‍ಗೆ ಅವಕಾಶ ಮಾಡಿಕೊಡುವುದಾಗಿ ಹೇಳುವ ಸಿಎಂ, ಮತ್ತೊಂದೆಡೆ ಇದೇ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ಪರೀಕ್ಷೆಗೆ ಹೋಗುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ, ತಾಯಂದಿರ ತಾಳಿ, ಕಾಲುಂಗುರ ತೆಗೆದಿಟ್ಟು ಹೋಗಲು ತಿಳಿಸುತ್ತದೆ. ರಾಜ್ಯ ಸರಕಾರದ ಈ ನಡವಳಿಕೆ ನಿಜವಾಗಿಯೂ ತಲೆತಗ್ಗಿಸುವಂಥದ್ದು. ಬಿಜೆಪಿ, ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.

ರಾಜ್ಯದ ಮುಖ್ಯಮಂತ್ರಿಗಳಿಂದ ಇಂಥ ಹೇಳಿಕೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಕನಿಷ್ಠ ಪಕ್ಷ ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳನ್ನಾದರೂ ರಾಜಕೀಯದಿಂದ ದೂರ ಇಡುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕಿತ್ತು ಎಂದು ಟೀಕಿಸಿದರು.

ಕಾಂಗ್ರೆಸ್‌ ನವರು, ತುಷ್ಟೀಕರಣ ನೀತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಾತೆತ್ತಿದರೆ  ಅಲ್ಪಸಂಖ್ಯಾತರ ಕುರಿತು ಮಾತ್ರ ಮಾತನಾಡುತ್ತಾರೆ.ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದ ಅವರು, ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯದ ನಂತರ 50ರಿಂದ 60 ವರ್ಷಗಳ ಕಾಲ ದೇಶ, ರಾಜ್ಯವನ್ನು ಆಳಿದೆ. ಆದರೂ, ಅಲ್ಪಸಂಖ್ಯಾತರಲ್ಲಿ ಶೇ 50ರಷ್ಟು ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದರೆ ಅದಕ್ಕೆ ಯಾರು ಹೊಣೆಗಾರರು ಎಂದು ಮುಖ್ಯಮಂತ್ರಿಗಳು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಅಲ್ಪಸಂಖ್ಯಾತರನ್ನು ಮತಬ್ಯಾಂಕ್ ಆಗಿ ಕಾಂಗ್ರೆಸ್ ಪಕ್ಷ ದುರುಪಯೋಗ ಪಡಿಸಿಕೊಂಡಿದೆ. ಪ್ರಾಮಾಣಿಕವಾಗಿ ಅಲ್ಪಸಂಖ್ಯಾತರನ್ನು ಮೇಲೆತ್ತುವ ಕೆಲಸ ಮಾಡಿಲಿಲ್ಲ. ಅವರ ಶಿಕ್ಷಣಕ್ಕೆ ಒತ್ತು ಕೊಟ್ಟು ಆರ್ಥಿಕವಾಗಿ ಮೇಲೆತ್ತುವ ಕಾರ್ಯವನ್ನು ಕಾಂಗ್ರೆಸ್ ಮಾಡಲಿಲ್ಲ ಎಂದು ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದರು.

ನೀವೇನು ಮಾಡಿದ್ದೀರಿ?

ಈ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತ ಮಹಿಳೆಯರನ್ನು ಕೂಡ ದೇಶದ ಜನತೆ ಗೌರವದಿಂದ ಕಾಣಬೇಕು; ಪ್ರತಿಯೊಬ್ಬ ಅಲ್ಪಸಂಖ್ಯಾತ ಮಹಿಳೆಯೂ ಗೌರವ, ಸ್ವಾಭಿಮಾನದಿಂದ ಬಾಳಿ ಬದುಕಬೇಕೆಂಬ ದೃಷ್ಟಿಕೋನದೊಂದಿಗೆ ತ್ರಿವಳಿ ತಲಾಖ್ ಅನ್ನು ನರೇಂದ್ರ ಮೋದಿಯವರು ರದ್ದು ಮಾಡಿದ್ದಾರೆ. ನೀವೇನು ಮಾಡಿದ್ದೀರಿ? ಎಂದು ವಿಜಯೇಂದ್ರ ಅವರು ಪ್ರಶ್ನಿಸಿದರು.

ಅಲ್ಪಸಂಖ್ಯಾತರ ಕುರಿತು ಕೇವಲ ಭಾಷಣ ಮಾಡುತ್ತೀರಿ. ಅವರಿಗಾಗಿ ಯಾವುದಾದರೂ ಯೋಜನೆ ರೂಪಿಸುವ ಮೂಲಕ ಮೇಲೆತ್ತಿದ್ದೀರಾ ಎಂದು ಕೇಳಿದರು. ಅಲ್ಪಸಂಖ್ಯಾತರು ನಿರುದ್ಯೋಗ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳನ್ನು ಎದುರಿಸಲು ಕಾಂಗ್ರೆಸ್ಸೇ ಕಾರಣ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಇವತ್ತು ಭೀಕರ ಬರಗಾಲವಿದೆ. ರೈತರ ಸಂಕಷ್ಟಕ್ಕೆ ಸರಕಾರ ಸ್ಪಂದಿಸುತ್ತಿಲ್ಲ. ಆ ಜವಾಬ್ದಾರಿ ಮರೆತ ರಾಜ್ಯ ಸರಕಾರವು, ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ಲೋಕಸಭಾ ಚುನಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ 20 ಕ್ಷೇತ್ರ ಗೆಲ್ಲುವ ಕನಸು ಕಾಣುತ್ತಿದೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಮೂಲಕ ಈ ದೇಶದ ಪ್ರಜ್ಞಾವಂತ ಮತದಾರರು, ಕಾಂಗ್ರೆಸ್ ಪಕ್ಷದ ಬೂಟಾಟಿಕೆಯ ಗ್ಯಾರಂಟಿಯನ್ನು ನಂಬುವುದಿಲ್ಲ. ಅದರ ಬದಲು ಮೋದಿ ಗ್ಯಾರಂಟಿಯನ್ನು ನಂಬುವುದು ರುಜುವಾತಾಗಿದೆ ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್ ಪಕ್ಷ ಹತಾಶೆಯಿಂದ ಸಮಾಜ ಸಮಾಜದ ಮಧ್ಯೆ, ಧರ್ಮ ಧರ್ಮದ ನಡುವೆ ವಿಷಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದೆ

ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ್ದು, ಶಾಲಾ ಮಕ್ಕಳಿಂದ ಶೌಚಾಲಯ ಶುಚಿಗೊಳಿಸಿದ ಘಟನೆಯು ಕಾನೂನು ಸುವ್ಯವಸ್ಥೆ ಕುಸಿದುದರ ಸಂಕೇತ. ರಾಜ್ಯದಲ್ಲಿ ಸಿಎಂ ಇದ್ದಾರಾ? ಸಚಿವರು ಇದ್ದಾರಾ? ಎಂದು ಪ್ರಶ್ನಿಸುವಂತಾಗಿದೆ. ಬರಗಾಲವಿದ್ದರೂ ಸಚಿವರು ಅಧಿಕಾರಿಗಳ ಸಭೆ ನಡೆಸಿಲ್ಲ. ಈ ಬೇಬವಾಬ್ದಾರಿ ನಡೆ ಒಂದು ಕಡೆ ಇದ್ದರೆ, ಇನ್ನೊಂದೆಡೆ ಹಿಜಾಬ್ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಹಿಂದೂ ಹೆಣ್ಮಕ್ಕಳ ತಾಳಿ, ಕಾಲುಂಗುರ ತೆಗೆಸುತ್ತಾರೆ. ನಿಮ್ಮ ಉದ್ದೇಶ ಏನು? ಎಂದು ಕೇಳಿದರು. ಒಡೆದಾಳುವ ನೀತಿಯನ್ನು ಕೈಬಿಟ್ಟು ನೀವು ಆರೂವರೆ ಕೋಟಿ ಜನರ ಸಿಎಂ ಎಂದು ನೆನಪಿಡಿ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News